Belagavi News In Kannada | News Belgaum

ಗಾರ್ಡನ್ಸ್ ಗಲೇರಿಯಾ ಮಾಲ್‍ನಲ್ಲಿ ಹತ್ಯೆ ಪ್ರಕರಣ – 7 ಮಂದಿ ಅರೆಸ್ಟ್

ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‍ನಲ್ಲಿ ವ್ಯಕ್ತಿಯೊಬ್ಬನ ಹತ್ಯೆಗೆ ಸಂಬಂಧಿಸಿ ಒಂಬತ್ತು ಜನರಲ್ಲಿ 7 ಮಂದಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಲಾಸ್ಟ್ ಲೆಮನ್ಸ್ ಬಾರ್‌ನ ಇಬ್ಬರು ಮಾಲ್ ಭದ್ರತಾ ಸಿಬ್ಬಂದಿ ಮತ್ತು ಐವರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಒಟ್ಟು ಒಂಬತ್ತು ಜನರು ಕೊಲೆಗೆ ಸಂಪರ್ಕ ಹೊಂದಿದ್ದರು. ಅವರಲ್ಲಿ ಎಂಟು ಜನರನ್ನು ಗುರುತಿಸಲಾಗಿದೆ. ಆದರೆ ಕೊನೆಯ ವ್ಯಕ್ತಿಯ ಗುರುತು ತಿಳಿದಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಏನಿದು ಘಟನೆ?
ಸೋಮವಾರ ರಾತ್ರಿ ನೋಯ್ಡಾದ ಸೆಕ್ಟರ್-38 ರ ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‍ನಲ್ಲಿ ಲಾಸ್ಟ್ ಲೆಮನ್ಸ್ ಬಾರ್‌ನ ಬೌನ್ಸರ್‌ಗಳಿಂದ ಬಿಹಾರದ ಚಾಪ್ರಾದ ಬ್ರಿಜೇಶ್ ರೈ ಎಂಬ 30 ವರ್ಷದ ವ್ಯಕ್ತಿಗೆ ಮಾರಣಾಂತಿಕವಾಗಿ ಥಳಿಸಿ ಹಲ್ಲೆ ಮಾಡಲಾಗಿತ್ತು.

ಬಿಲ್ ಪಾವತಿ ವಿಚಾರವಾಗಿ ವಾಗ್ವಾದ ನಡೆದಿದ್ದು, ವಾದವು ಅತಿರೇಕಕ್ಕೇರಿ ಜಗಳಕ್ಕೆ ತಿರುಗಿತ್ತು. ಅಲ್ಲಿ ಬೌನ್ಸರ್‌ಗಳು ಬ್ರಿಜೇಶ್‍ನನ್ನು ಥಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ವೇಳೆ ತೀವ್ರ ಗಾಯಗೊಂಡಿದ್ದ ಬ್ರಿಜೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.

ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ಪ್ರಕಾರ, ಬಾರ್‌ನಲ್ಲಿದ್ದ ಜನರು ಬಿಲ್‍ಗಾಗಿ ಜಗಳವಾಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬ್ರಿಜೇಶ್ ಜೊತೆಗಿದ್ದವರ ಹೇಳಿಕೆಯನ್ನೂ ಪಡೆಯಲಾಗುವುದು, ನಂತರ ಕೊಲೆಗೆ ನಿಜವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದರು