Belagavi News In Kannada | News Belgaum

ನಾಯಿಗಳ ದಾಳಿಗೆ ಎರಡೂವರೆ ವರ್ಷದ ಮಗು ಬಲಿ

ಹೈದರಾಬಾದ್: ಹಲವು ಬೀದಿ ನಾಯಿಗಳ ದಾಳಿಗೆ ಮಗುವೊಂದು ಮೃತಪಟ್ಟಿರುವ ಆಘಾತಕಾರಿ ಘಟನೆ ಹೈದರಾಬಾದ್‌ನ ಗೊಲ್ಕೊಂಡಾದ ಬಾದಾ ಬಜಾರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಎರಡೂವರೆ ವರ್ಷದ ಅನಸ್ ಅಹ್ಮದ್, ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಮಗು ಮೇಲೆ ದಾಳಿ ನಡೆಸಿವೆ. ಮಗುವಿನ ಚೀರಾಟ ಕೇಳಿದ ಪೋಷಕರು ಮತ್ತು ನೆರೆಹೊರೆಯವರು ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ ಮತ್ತು ನಾಯಿಗಳನ್ನು ಓಡಿಸಿದ್ದಾರೆ.

 

 

ಮಗುವಿನ ಮುಖ, ಗಂಟಲು ಮತ್ತು ದೇಹದ ಇತರ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮಗುವಿನ ಮೇಲೆ ದಾಳಿ ಮಾಡಿರುವ ಮತ್ತು ಎಳೆದೊಯ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಇಂತದ್ದೇ ರೀತಿಯ ಎರಡು ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ನಾಯಿಗಳು ಮಗುವಿನ ಪ್ರಾಣವನ್ನೇ ಬಲಿಪಡೆದಿವೆ ಎಂದು ಸ್ಥಳೀಯ ನಿವಾಸಿ ದೂರಿದ್ದಾರೆ.