Belagavi News In Kannada | News Belgaum

ಕೃಷಿ ವಿಜ್ಞಾನ ಕೇಂದ್ರದಿಂದ ಸೋಯಾಅವರೆ ಕ್ಷೇತ್ರೋತ್ಸವ

ಕೃಷಿ ವಿಜ್ಞಾನ ಕೇಂದ್ರದಿಂದ ಸೋಯಾಅವರೆ ಕ್ಷೇತ್ರೋತ್ಸವ
ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ, ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆ, ಇಂದೋರ್, ಕೃಷಿ ಇಲಾಖೆ, ಬೆಳಗಾವಿ ಇವರ ಸಹಯೋಗದಲ್ಲಿ ಸೋಯಾಅವರೆ ಕ್ಷೇತ್ರೋತ್ಸವವನ್ನು ಬೆಳಗಾವಿ ಜಿಲ್ಲೆಯ ಗಣ ಕೊಪ್ಪ ಗ್ರಾಮದ ಉಮೇಶ ಗಾಬಿಯವರ ಜಮೀನಿನಲ್ಲಿ ಆಯೋಜಿಸಿಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ ಬಿ. ಆರ್. ಪಾಟೀಲ ಸ್ವಾಗತಿಸಿದರು ಹಾಗೂ ಕೃಷಿ ವಿಜ್ಞಾನ ಕೇಂದ್ರವು ಅಧಿಕ ಇಳುವರಿ ನೀಡುವ ಸೋಯಾಬೀನ್ ತಳಿಗಳನ್ನು ಈ ಭಾಗದ ರೈತರಿಗೆ ಪರಿಚಯಿಸಲಾಗುತ್ತಿದೆ, ರೈತರು ಕೇಂದ್ರದ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಸಸ್ಯ ತಳಿಗಳ ಸಂರಕ್ಷಣೆ ಹಾಗೂ ರೈತರ ಹಕ್ಕುಗಳ ಪ್ರಾಧಿಕಾರದ ಹಿಂದಿನ ಅಧ್ಯಕ್ಷರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಆರ್. ಆರ್. ಹಂಚಿನಾಳ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ ಕೃಷಿಯಲ್ಲಿ ಹಸಿರುಕ್ರಾಂತಿಯಾಗಿದೆ. ಆಹಾರ ಸ್ವಾವಲಂಬನೆ ಜೊತೆಗೆ ಪೋಷಕಾಂಶಗಳ ಭದ್ರತೆಗೆ ಒತ್ತು ನೀಡಲಾಗುತ್ತಿದೆ. ನಾವು ಸುಮಾರು 8200 ಕೋಟಿ ರೂಪಾಯಿ ಖಾದ್ಯತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಉಕೇನ್ ಹಾಗೂ ಇಂಡೋನೇಷಿಯಾ ದೇಶಗಳಿಂದ ಅಡುಗೆ ಎಣ್ಣೆ ಸದ್ಯಕ್ಕೆ ದೊರೆಯುತ್ತಿಲ್ಲ. ನಮ್ಮ ದೇಶದಲ್ಲಿ ಎಣ್ಣೆಕಾಳು ಬೆಳೆಗಳ ಸ್ವಾವಲಂಬನೆ ಮುಖ್ಯವಾಗಿದೆ. ಆದ್ದರಿಂದ ಹೆಚ್ಚು ಇಳುವರಿ ನೀಡುವ ಸೋಯಾಬೀನ್ ತಳಿ ಆರ್‍ವ್ಹಿಎಸ್-24 ಕ್ಷೇತ್ರೋತ್ಸವವನ್ನು ಆಯೋಜಿಸಿ ರೈತರಿಗೆ ಪರಿಚಯಿಸಲಾಗುತ್ತಿದೆ ಎಂದರು.
ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ ಹಿರೇಮಠÀ ಉದ್ಘಾಟನಾ ನುಡಿಯಲ್ಲಿ ಕೃಷಿಯಲ್ಲಿ ಸಾಕಷ್ಟು ನುರಿತ ತಂತ್ರಜ್ಞಾನಗಳು ಬಂದಿವೆ. ಆದರೆ, ಅವುಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಕೆಲಸವಾಗಬೇಕಿದೆ. ನಾವು ಚಿಕ್ಕವರಿದ್ದಾಗ ಕಂಡ ಕೃಷಿ ಈಗ ಬಹಳಷ್ಟು ಕೃಷಿಯಲ್ಲಿ ಕ್ರಾಂತಿಯಾಗಿದೆ. ಎಲ್ಲ ರೈತಬಾಂಧವರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು, ಜೊತೆಗೆ ವಿವಿಧ ಬ್ಯಾಂಕುಗಳ ಸಾಕಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು, ರೈತರು ಇದರ ಹಣವನ್ನು ಕೃಷಿಯಲ್ಲಿ ಬಳಸಿ ಹೆಚ್ಚು ಆದಾಯ ಪಡೆಯಲು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಂಟಿ ಕೃಷಿ ನಿರ್ದೇಶಕ ಶ್ರೀ ಶಿವನಗೌಡ ಎಸ್. ಪಾಟೀಲ ಮಾತನಾಡಿ, ಕೃಷಿ ಇಲಾಖೆಯು ಮುಂದೆ ಬರುವ ಮುಂಗಾರು ಹಂಗಾಮಿಗೆ ಬೀಜ ಮತ್ತು ಗೊಬ್ಬರದ ತಯಾರಿಮಾಡಿ ರೈತರಿಗೆ ಪೂರೈಸಲು ಕೃಷಿ ಇಲಾಖೆ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ತರಹದ ಕೊರತೆಯಾಗುವುದಿಲ್ಲ ಎಂದು ಹೇಳಿದರು.
ಕಾಡಾ (ಮಲಪ್ರಭಾ ಹಾಗೂ ಘಟಪ್ರಭಾ) ಅಧ್ಯಕ್ಷರಾದ ಡಾ. ವ್ಹಿ. ಆಯ್. ಪಾಟೀಲ ಮಾತನಾಡಿ, ನಾವು ಕೃಷಿಯಲ್ಲಿ ಇನ್ನೂ ಹಳೆಯ ಪದ್ಧತಿಗಳನ್ನು ಅಳವಡಿಸುತ್ತಿದ್ದೇವೆ. ಹಳೆ ಪದ್ಧತಿಗಳನ್ನು ಬಿಟ್ಟು ಸಮಗ್ರ ಕೃಷಿ ಕಡೆಗೆ ರೈತರು ಲಕ್ಷ್ಯ ವಹಿಸಬೇಕು. ಒಳ್ಳೆಯ ಕೃಷಿ ಕಾರ್ಯಕ್ಕೆ ಸಾಲವನ್ನು ತೆಗೆದುಕೊಂಡು ಉತ್ತಮ ಬೆಳೆಯನ್ನು ಬೆಳೆಯಬೇಕು, ಜೊತೆಗೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಮೇಲಿಂದ ಮೇಲೆ ಭೇಟಿ ನೀಡಿ ಅಲ್ಲಿ ನಡೆಯುವ ವಿವಿಧ ನೂತನ ಚಟುವಟಿಕೆಗಳನ್ನು ಗಮನಿಸಿ ಅವುಗಳನ್ನು ಕೃಷಿಯಲ್ಲಿ ಅಳವಡಿಸಲು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಬ. ಅಂಗಡಿ, ಉಪಕೃಷಿ ನಿರ್ದೇಶಕ ಹೆಚ್. ಡಿ. ಕೋಳೇಕರ, ಬೈಲಹೊಂಗಲ ತಹಶೀಲ್ದಾರ ಬಸವರಾಜ ನಾಗರಾಳ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಬಾಬು ಹಿರೇಮಠ ಉಪಸ್ಥಿತರಿದ್ದರು. ಶಿವಾನಂದ ಮಠದ ಪೂಜ್ಯರಾದ ಮಹೇಶ ಆನಂದ ಸ್ವಾಮೀಜಿಯವರು ಆರ್ಶೀವಚನ ನೀಡಿದರು. ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.