Belagavi News In Kannada | News Belgaum

ಐವರು ಆರೋಪಿಗಳ ಬಂಧನ; 50 ಸಾವಿರ ಮೌಲ್ಯದ ಶ್ರೀಗಂಧ ವಶ

ಬೆಂಗಳೂರು: ಶ್ರೀಗಂಧ ಮರವನ್ನು ಕಡಿದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು, 50 ಸಾವಿರ ಮೌಲ್ಯದ ಶ್ರೀಗಂದದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರಾ ತಾಲ್ಲೂಕಿನ ಕಾರ್ಪೆಹಳ್ಳಿಯ ವೆಂಕಟೇಶ್(51), ಆಂದ್ರಪ್ರದೇಶದ ಪುಟ್ಟಪರ್ತಿ ಜಿಲ್ಲೆ ಕದರಿ ಟೌನ್‍ನ ವೆಂಕಟರಮಣ ಅಲಿಯಾಸ್ ರಮಣ(42), ನೆಲಮಂಗಲ ತಾಲ್ಲೂಕಿನ ತುಳಸಿಗುಪ್ಪೆಯ ವೆಂಕಟೇಶ್ ಅಲಿಯಾಸ್ ಸಣ್ಣಿ(28), ಶಿಡ್ಲಘಟ್ಟದ ಅನಿಲ್‍ಕುಮಾರ್(42) ಹಾಗೂ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ವಾನಾವೂಲ್ ಗ್ರಾಮದ ಕೃಷ್ಣಮೂರ್ತಿ ಬಂಧಿತ ಆರೋಪಿಗಳು.

ಕಳೆದ ಫೆ. 9ರಂದು ಸಾದರಹಳ್ಳಿಯ ಹಾಲಿವುಡ್‍ಟೌನ್ ಬಡಾವಣೆಯಲ್ಲಿ 15 ಎತ್ತರದ ಒಂದು ಶ್ರೀಗಂಧ ಮರವನ್ನು ಹಾಗೂ ಏ. 20ರಂದು ಮುಂಜಾನೆ 1 ಗಂಟೆ ಸಂದರ್ಭದಲ್ಲಿ ಸುಮಾರು 20 ಅಡಿ ಎತ್ತರದ ಶ್ರೀಗಂಧ ಮರವನ್ನು ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಕೊಡಲಿ, ಕಬ್ಬಣದ ಹಾರೆ, ಸಾಮಿಲ್ ಬ್ಲೇಡ್, ಒಂದು ಹೀರೋಹೊಂಡಾ ಬೈಕ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಅವರನ್ನು ದೇವನಹಳ್ಳಿಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಸಿಪಿ ಅನೂಪ್‍ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ದೇವನಹಳ್ಳಿ ಉಪವಿಭಾಗದ ಎಸಿಪಿ ಬಾಲಕೃಷ್ಣ ಅವರ ಸೂಚನೆಯಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಇನ್‍ಸ್ಪೆಕ್ಟರ್ ಬಾಲಕೃಷ್ಣ, ಎಸ್‍ಐ ಮನೋಜ್‍ಕುಮಾರ್ ಮತ್ತವರ ತಂಡದ ಕಾರ್ಯ ವೈಖರಿಯನ್ನು ಶ್ಲಾಘಿಸಲಾಗಿದೆ.//////