ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ: ಕೇಜ್ರಿವಾಲ್ ಟೀಕೆ

ಗಾಂಧೀನಗರ: ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಗುಜರಾತ್ನಲ್ಲಿ 6,000 ಸರ್ಕಾರಿ ಶಾಲೆಗಳಿದ್ದು, ಬಹುಪಾಲು ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷಾಂತರ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ದೆಹಲಿಯ ಶಾಲೆಗಳನ್ನು ಬದಲಾಯಿಸಿದ ರೀತಿ ನಾವು ಇಲ್ಲಿಯೂ ಸುಧಾರಣೆ ತರಬಹುದು. ನನಗೆ ಒಂದು ಅವಕಾಶ ಕೊಡಿ. ಗುಜರಾತ್ನ ಸರ್ಕಾರಿ ಶಾಲೆಗಳನ್ನು ಸುಧಾರಿಸದಿದ್ದರೆ ನನ್ನನ್ನು ಒದ್ದೋಡಿಸಿ ಎಂದು ಹೇಳಿದ್ದಾರೆ.
ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಗುಜರಾತ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದಿದ್ದಾರೆ.
ದೆಹಲಿಯಲ್ಲಿ ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಓದುತ್ತಿದ್ದಾರೆ. ದೆಹಲಿಯಲ್ಲಿ ಈ ಬಾರಿ ಶೇ.99.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿಜೆಪಿ ಶ್ರೀಮಂತರ ಜತೆ ನಿಂತು ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಿವೆ. ಆದರೆ ನಾವು ಬಡವರ ಜೊತೆ ನಿಲ್ಲುತ್ತೇವೆ ಎಂಬುದನ್ನು ನಿಮಗೆ ಹೇಳಲು ನಾನು ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಆದಿವಾಸಿಗಳು ಹಿಂದಿನಿಂದಲೂ ಶೋಷಣೆಗೆ ಒಳಗಾಗಿದ್ದಾರೆ. ಅವರು ಮೊದಲು ಬ್ರಿಟಿಷರಿಂದ ಶೋಷಣೆಗೆ ಒಳಗಾದರು. ಈಗಲೂ ಅವರು ಶೋಷಣೆಗೆ ಒಳಗಾಗುತ್ತಿದ್ದಾರೆ. ನಮ್ಮದು ಸಾಮಾನ್ಯ ಜನರ ಪಕ್ಷವೇ ಹೊರತು ಶ್ರೀಮಂತರದ್ದಲ್ಲ ಎಂದು ಪ್ರತಿಪಾದಿಸಿದ್ದಾರೆ.
ದೆಹಲಿಯಲ್ಲಿ ಎರಡನೇ ಬಾರಿ ಹಾಗೂ ಪಂಜಾಬ್ನಲ್ಲಿ ಮೊದಲ ಬಾರಿಗೆ ಸರ್ಕಾರವನ್ನು ರಚಿಸಿರುವ ಆಮ್ ಆದ್ಮಿ ಪಕ್ಷ ಈಗ ಗುಜರಾತ್ ಕಡೆ ಮುಖ ಮಾಡಿದೆ. ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ದೆಹಲಿ ಮಾದರಿ ಮುಂದಿಟ್ಟುಕೊಂಡು ಎಎಪಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.///////