Belagavi News In Kannada | News Belgaum

ನಾಪತ್ತೆಯಾಗಿದ್ದ ಬಾಲಕಿ ನಾಲ್ಕು ದಿನದ ಬಳಿಕ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಪತ್ತೆ

ಬೆಳಗಾವಿ: ಮನೆ ಎದುರು ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕಿ 4 ದಿನಗಳ ನಂತರ ನಿತ್ರಾಣ ಸ್ಥತಿಯಲ್ಲಿ ಖಾನಾಪುರ ತಾಲೂಕಿನ ಜಾಂಬೋಟಿ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿದ್ದಾಳೆ.

ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ಪತ್ನಿ ಮಗುವಿನ ಜತೆ ತವರು ಮನೆಗೆ ಚಿರೇಖಾನಿ ಗ್ರಾಮಕ್ಕೆ ಆಗಮಿಸಿದ್ದರು. ಎರಡು ದಿನಗಳ ಕಾಲ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಖಾನಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಕಾಡಂಚಿನ ಗ್ರಾಮವಾಗಿದ್ದರಿಂದ ಬಾಲಕಿ ಪತ್ತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ನೆರವನ್ನು ಪೊಲೀಸರು ಪಡೆದು ಸುತ್ತಮೂತ್ತಲಿನ ಗ್ರಾಮಗಳ ಯುವಕರ ಸಹಾಯದಿಂದ ಅರಣ್ಯದಲ್ಲಿ ಶೋಧ ಕಾರ್ಯ ನಡೆಸಿದ್ದರು.

ನಿತ್ರಾಣ ಸ್ಥಿತಿಯಲ್ಲಿ ಬಾಲಕಿ ಪತ್ತೆ: ಸಂಜೆ ವೇಳೆಗೆ ಚಿರೇಖಾನಿ ಗ್ರಾಮದಿಂದ ಎರಡೂವರೆ ಕಿಲೋಮೀಟರ್‌  ದೂರದ ಅರಣ್ಯದಲ್ಲಿ  ಮರದ ಕೆಳಗೆ ಬಾಲಕಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಕಾಲಿಗೆ ಇರುವೆ ಹಾಗೂ ಜಿರಳೆಗಳು ಕಚ್ಚಿದರಿಂದ ನಿತ್ರಾಣಗೊಂಡಿದ್ದಳು.  ತಕ್ಷಣ ಖಾನಾಪುರ ತಾಲೂಕು ಆಸ್ಪತ್ರೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಕೊಡೆಸಿ ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.

ಸ್ವಗ್ರಾಮಕ್ಕೆ ಬಾಲಕಿ ವಾಪಸ್‌: ಬೆಳಗಾವಿ ಜಿಲಾಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮಗಳ ಜತೆ ಪೋಷಕರು ಸ್ವಗ್ರಾಮಕ್ಕೆ ವಾಪಸ್‌ ಆಗಿದ್ದಾರೆ. ಇನ್ನು ಮನೆ ಎದುರು ಆಟವಾಡುತ್ತಿದ್ದ ಬಾಲಕಿ ಇದ್ದಕ್ಕಿದ್ದ ಹಾಗೇ ಅರಣ್ಯಕ್ಕೆ ಹೋಗಿದ್ದು ಹೇಗೆ ಎಂಬುವುದು ನಿಗೂಢವಾಗಿದೆ. ಈ ಕುರಿತು ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ತನಿಖೆ ಮುಂದುವರೆದಿದೆ./////