ಬೈಲಹೊಂಗಲ ಜಿಲ್ಲೆಗೆ ಆಗ್ರಹಿಸಿ ಸಚಿವ ಉಮೇಶ ಕತ್ತಿಗೆ ಮನವಿ ಸಲ್ಲಿಸಿದ ಬೈಲಹೊಂಗಲ ಸರ್ವಪಕ್ಷ ನಿಯೋಗ

ಬೆಳಗಾವಿ: ಬೈಲಹೊಂಗಲ ಜಿಲ್ಲೆಯನ್ನಾಗಿಸುವಂತೆ ಆಗ್ರಹಿಸಿ ಬೈಲಹೊಂಗಲ ಸರ್ವಪಕ್ಷ ನಿಯೋಗ ಸಚಿವ ಉಮೇಶ ಕತ್ತಿ ಅವರನ್ನು ಸಂಕೇಶ್ವರದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ, ಚಿಕ್ಕೋಡಿ ಮತ್ತು ಬೈಲಹೊಂಗಲನ್ನು ಜಿಲ್ಲೆಯನ್ನಾಗಿಸುವಂತೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಬೈಲಹೊಂಗಲದ ಸರ್ವಪಕ್ಷಗಳ ನಿಯೋಗ ಒತ್ತಾಯಿಸಿತು.
ಈ ವೇಳೆ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಉಮೇಶ ಕತ್ತಿ, ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಯನ್ನಾಗಿ ಘೋಷಿಸಬೇಕು. ಅಖಂಡ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಹಾವೇರಿ, ಗದಗ ಜಿಲ್ಲೆಯನ್ನು ರಚನೆ ಮಾಡಿದಂತೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಮೂರು ಜಿಲ್ಲೆಗಳನ್ನಾಗಿಸಬೇಕು. ಮೂರು ಜಿಲ್ಲೆಯಾದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಈ ಸಂಬಂಧ ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಮುಖ್ಯಮಂತ್ರಿ ಒಲವು ಹೊಂದಿದ್ದಾರೆ ಇಲ್ಲವೋ ನನಗೆ ಗೊತ್ತಿಲ್ಲ. ಅವರ ಮೇಲೆ ಒತ್ತಡ ಹೇರುವುದು ನಮ್ಮ ಕರ್ತವ್ಯ. ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿರುವುದರಿಂದ ಬೇರೆ ಜಿಲ್ಲೆಯಷ್ಟೇ ಇಲ್ಲಿಯೂ ಅನುದಾನ ನೀಡಲಾಗುತ್ತಿದೆ. ಇದು ಅಭಿವೃದ್ಧಿಗೆ ಯಾವುದಕ್ಕೂ ಸಾಲುವುದಿಲ್ಲ. ಧಾರವಾಡ, ಹಾವೇರಿ, ಗದಗ ಜಿಲ್ಲೆಗೆ ಪ್ರತ್ಯೇಕವಾಗಿ 450 ಕೋಟಿ ಅನುದಾನ ಬರುತ್ತದೆ. ಅಷ್ಟೇ ಬೆಳಗಾವಿ ಜಿಲ್ಲೆಗೆ ಬರುತ್ತಿದೆ. ಈಗ ಜಿಲ್ಲೆಯ ಜನತೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ದನಿ ಎತ್ತುತ್ತಿದ್ದಾರೆ ಎಂದು ಅವರು ಹೇಳಿದರು.
ಈ ವೇಳೆ ವಿವಿಧ ಮಠಾಧೀಶರು, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸೇರಿದಂತೆ ಇತರ ಮುಖಂಡರು ಇದ್ದರು.////