Belagavi News In Kannada | News Belgaum

ಸರ್ಕಾರ ಕನ್ನಡ ಶಾಲೆಗಳು ಮುಚ್ಚದಂತೆ ನಿಗಾ ವಹಿಸುವುದು ಅಗತ್ಯ ಕಸಾಪ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಾಡೋಜ ಡಾ. ಮಹೇಶ ಜೋಶಿ ಅಭಿಮತ

ಅಥಣಿ: ರಾಜ್ಯದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆ ಯಾಗುತ್ತಿರುವುದು ಕಳವಳಕರ ವಿಷಯವಾಗಿದ್ದು, ಕನ್ನಡ ಶಾಲೆಗಳು ಉಳಿದರೆ ಕನ್ನಡ ಭಾಷೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕನ್ನಡ ಶಾಲೆಗಳು ಮುಚ್ಚದಂತೆ ನಿಗಾವಹಿಸುವದು ಅಗತ್ಯ ಎಂದು  ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ  ನಾಡೋಜ ಡಾ. ಮಹೇಶ ಜೋಶಿ  ಹೇಳಿದರು.
 ಅವರು  ಬುಧವಾರ  ಪಟ್ಟಣದ ಡಾ. ಆರ್.ಎಚ್.ಕುಲಕರ್ಣಿ ಸಭಾಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷ್ಯತ್ತು ತಾಲೂಕಾ ಘಟಕದ ಪದಾಧಿಕಾರಿಗಳ ಪದಗ್ರಹಣ,  ಅಭಿನಂದನಾ ಸಭೆ, ೨೦೨೧ ರಿಂದ ೨೦೨೬ ರ ಅವಧಿಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನಾ    ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗಡಿಭಾಗದಲ್ಲಿನ ಯಾವ ಕನ್ನಡ ಶಾಲೆಗಳು ಮುಚ್ಚ ಬಾರದು, ಕನ್ನಡ ಭಾಷೆಯನ್ನು ಬಳಕೆಯ ಭಾಷೆಯನ್ನಾಗಿ ಮಾಡುವಂತೆ ಸಲಹೆಯನ್ನು ನೀಡಿದ  ಅವರು ಹಾವೇರಿಯಲ್ಲಿ ಸಪ್ಟಂಬರ್ 23ರಿಂದ  ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೆಳಕಿಗೆ ಬಾರದ ಯುವ ಸಾಹಿತಿಗಳಿಗೆ, ಕಲಾವಿದರಿಗೆ ಅವಕಾಶ ಕಲ್ಪಿಸುವುದೇ  ಪರಿಷತ್ತಿನ ಉದ್ದೇಶವಾಗಿದೆ.
 ಈ ಹಿಂದೆ ಆಗಿರುವ ಅನ್ಯಾವನ್ನು ಸರಿಪಡೆಸುತ್ತೇನೆ, 2000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ  ಅತಿ ಪ್ರಾಚಿನ ಭಾಷೆಯಾಗಿದೆ, ಕನ್ನಡ ಭಾಷೆ ಒಂದು ಪರಿಪೂರ್ಣ ಭಾಷೆಯಾಗಿದೆ. ಕನ್ನಡ ಭಾಷೆ ವೈಜ್ಞಾನಿಕ ಹಾಗೂ ಗಣಕಿಕೃತಗೆ ಸಮರ್ಪಕ ಭಾಷೆಯಾಗಿದೆ. ಆಂಗ್ಲ ಭಾಷೆ ಯಾವತ್ತು ಪರಿಪೂರ್ಣ ಭಾಷೆಯಾಗಿ ಹೊರಹೊಮ್ಮಿಲ್ಲ, ಅದೇ ರೀತಿ ಹಿಂದಿಯು ಕೂಡಾ ಅನೇಕ ನ್ಯೂನ್ಯತೆಯನ್ನು ಒಳಗೊಂಡ ಭಾಷೆಯಾಗಿದೆ. ಈ ಭಾಷೆ ಸ್ತ್ರೀಲಿಂಗ, ಪುಲಿಂಗ ವನ್ನು  ಹೊಂದಿರದ ಭಾಷೆಯಾಗಿದೆ ಎಂದರು.
 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ   ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ  ಸವದಿ ಮಾತನಾಡಿ, ಕನ್ನಡ ಭಾಷೆ ನಮಗೇಲ್ಲ ಭಗವತ್ಗೀತೆ ಇದ್ದಂತೆ.  ಕನ್ನಡ ಭಾಷೆಯನ್ನು ಸದೃಡ ಭಾಷೆಯನ್ನಾಗಿಸಬೇಕಾಗಿದೆ. ಒಂದು ಕಾಲದಲ್ಲಿ ಬೆಳಗಾವಿ ಮರಾಠಿಮಯ ವಾಗಿತ್ತು, ಅಲ್ಲಿ ಕನ್ನಡ ಮಾತನಾಡುವುದೆ ಅಸಾಧ್ಯ ವಾಗಿತ್ತು. ಆದರೆ ಇವತ್ತು ಕನ್ನಡ ಶೇ.95 ರಷ್ಟು ಕನ್ನಡಮಯವಾಗಿ ಬದಲಾವಣೆಯಾಗಿದೆ. ಅಥಣಿಯಲ್ಲಿ ಕನ್ನಡ ಭವನ ನಿರ್ಮಿಸುವುದು ಸೇರಿದಂತೆ ಕನ್ನಡ ಪರ ಕಾರ್ಯಕ್ರಮಗಳಿಗೆ  ನಾನು ಒಬ್ಬ ಕನ್ನಡದ  ಸೇವಕನಾಗಿ  ಕೈ ಜೋಡಿಸುತ್ತೇನೆಂದು ಹೇಳಿದರು.
 ಕನ್ನಡ ಸಾಹಿತ್ಯ ಪರಿಷತ್ತಿನ  ರಾಜ್ಯಾಧ್ಯಕ್ಷರಾಗಿರುವ ಡಾ. ಮಹೇಶ್ ಜೋಶಿ  ಅಧಿಕಾರದವದಿಯಲ್ಲಿ ಕನ್ನಡ ಪರ, ಸಾಹಿತ್ಯ  ಪರ ಉತ್ತಮವಾದ ಕಾರ್ಯಗಳು ನಡೆಯುತ್ತವೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು. ಬೇರೆ ಭಾಷೆಗಳ ವ್ಯಾಮೋಹದಿಂದಾಗಿ ಕನ್ನಡ ಭಾಷೆಗೆ ತೊಂದರೆ ಉಂಟಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
 ಮುಖ್ಯ ಅತಿಥಿಗಳಾಗಿದ್ದ  ಆರೆಸ್ಸೆಸ್ ಮುಖಂಡ  ಅರವಿಂದರಾವ ದೇಶಪಾಂಡೆ  ಮತ್ತು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೇಟಗುಡ್ಡ ಮಾತನಾಡಿದರು.
 ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲೂಕಾ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಕನಶೇಟ್ಟಿ ಪ್ರಾಸ್ತಾವಿಕವಾಗಿ  ಮಾತನಾಡಿ, ಗಡಿ ಭಾಗವಾದ ಅಥಣಿ ತಾಲೂಕಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಪರ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರ ನೀಡಬೇಕು. ಅಥಣಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಡಾ.ಅರ್ಚನಾ ಅಥಣಿ ವಿರಚಿತ ಗಡಿಯಲ್ಲಿ ನುಡಿ ತೇರು ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.
 ಸಮಾರಂಭದ ಸಾನ್ನಿಧ್ಯ ವಹಿಸಿದ್ದ  ಮೋಟಗಿ ಮಠದ ಪ್ರಭು ಚನ್ನಬಸವ  ಸ್ವಾಮೀಜಿ ಮತ್ತು ಬಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು  ಆಶೀರ್ವಚನ ನೀಡಿದರು.
 ಈ ವೇಳೆ  ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಬ ಲೋಕಾಪೂರ,  ವಿಮೋಚನಾ ಸಂಸ್ಥೆಯ ಅಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ್, ಕೆ.ಎಲ್.ಕುಂದರಗಿ, ಎ.ಎಮ್.ಖೋಬ್ರಿ, ನಾರಾಯಣ ಆನಿಖಿಂಡಿ, ದೇವೇಂದ್ರ ಬಿಸ್ವಾಗರ, ರಾವಸಾಬ ಜಕನೂರ, ವಿಜಯಕುಮಾರ ಅಡಹಳ್ಳಿ, ಎಸ್.ಕೆ.ಹೋಳೆಪ್ಪನವರ, ಮಹಾದೇವ ಬಿರಾದಾರ, ರಾಮಣ್ಣ ದೋಡ್ಡನಿಂಗಪ್ಪಗೋಳ, ಪ್ರಿಯಂವದಾ ಹುಲಗಬಾಳಿ, ಜಯಶ್ರೀ ಪೂಜಾರಿ, ಪ್ರಭಾ ಬೋರಗಾವಕರ, ರಮೇಶ್ ಸಿಂದಗಿ, ಚನ್ನಬಸಯ್ಯ ಇಟ್ನಾಳಮಠ, ಉದಯ್ ಕುಲಕರ್ಣಿ, ಕೈಲಾಸ್ ಮಧುಬಾವಿ, ವಿಜಯ ಕಾಂಬಳೆ, ದೀಪಕ ಶಿಂದೆ   ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
  ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ಸ್ವಾಗತಿಸಿದರು. ಉಪನ್ಯಾಸಕ ಎ.ಬಿ.ಝರೆ, ಕು. ನಿಲಾಂಬಿಕಾ ಹೋನ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ವಂದಿಸಿದರು.//////