Belagavi News In Kannada | News Belgaum

ಸ್ಟಾನ್ಝಾ ಲೀವಿಂಗ್ ಹೆಸರಿನ ಪಿಜಿಯಲ್ಲಿ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಿಪಡಿಸಬೇಕಾದ ಆಡಳಿತ ಮಂಡಳಿ ನಿರ್ಲಕ್ಷ್ಯ

ಬೆಳಗಾವಿ: ಇಲ್ಲಿನ ಶಿವಬಸವನಗರ ಜ್ಯೋತಿಬಾ ದೇವಾಲಯದ ಬಳಿ ಇರುವ ಸ್ಟಾನ್ಝಾ ಲೀವಿಂಗ್ ಹೆಸರಿನ ಪಿಜಿಯಲ್ಲಿ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಿಪಡಿಸಬೇಕಾದ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ
ಅಸಮರ್ಪಕ ಊಟದ ವ್ಯವಸ್ಥೆ, ಕಲುಷಿತ ಕುಡಿಯುವ ನೀರು ನೀಡಲಾಗುತ್ತಿದ್ದು, ಇಲ್ಲಿನ ಅವ್ಯವಸ್ಥೆಗೆ ಅಲ್ಲಿ ಬಾಡಿಗೆಗೆ ವಾಸವಿರುವ ಮಹಿಳಾ ಉದ್ಯೋಗಿಗಳು ಮೂರು ದಿನಕ್ಕೊಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಯಾವುದೇ ಸಮಸ್ಯೆ ಇದ್ದರೂ ಆಪ್ ಮೂಲಕ ದೂರು ನೀಡಿ ೨೪ ಗಂಟೆಯೊಳಗೆ ನಾವು ಸರಿಪಡಿಸುತ್ತೇವೆ ಎಂದು ದಾಖಲಾತಿ ಸಮಯದಲ್ಲಿ ಆಶ್ವಾಸನೆ ನೀಡಿದ್ದ ಮುಖ್ಯಸ್ಥರು, ದಾಖಲಾತಿ ನಂತರ ವರಸೆ ಬದಲಿಸಿದ್ದಾರೆ, ಸಮಸ್ಯೆಗಳನ್ನು ಸರಿಪಡಿಸುವ ಬದಲು ನಿವಾಸಿಗಳ ದೂರಿಗೆ ಕ್ಯಾರೇ ಎನ್ನುತ್ತಿಲ್ಲ. ನಮ್ಮಲ್ಲೇ ಆಹಾರ ತಯಾರಿಕೆ ಮಾಡಿ ನೀಡುತ್ತೇವೆ ಎಂದಿದ್ದವರು ಬೇರೆ ಹೋಟೆಲ್‌ನಿಂದ ಮೂರು ಹೊತ್ತಿನ ಊಟ ತರಿಸುತ್ತಿದ್ದಾರೆ, ಆ ಊಟ ಗುಣಮಟ್ಟದ್ದಾಗಿಲ್ಲ, ಅರೆಬರೆ ಬೆಂದ ದೋಸೆ, ಹಳಸಿದ ಅನ್ನ, ಅವಧಿ ಮೀರಿದ ಆಹಾರಗಳನ್ನು ಸರಬರಾಜು ಮಾಡುತ್ತಿದ್ದಾರೆ, ಇದರಿಂದ ನಿವಾಸಿಗಳು ಎರಡು ಮೂರು ದಿನಕ್ಕೊಮ್ಮೆ ವಾಂತಿ, ಬೇಧಿಯಿಂದ ಬಳಲುತ್ತಿದ್ದಾರೆ.
ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಅಧಿಕಾರಿಗಳು ಪಿಜಿಗೆ ಭೇಟಿ ನೀಡಿ ಪರಿಶೀಲಿಸಿಕೊಂಡು ಹೋಗಿದ್ದಾರೆ, ಆಹಾರ ಸರಬರಾಜು ಮಾಡಲು ಪಡೆದಿರುವ ಪರವಾನಗಿ ಹಾಜರುಪಡಿಸುವಂತೆ ಸೂಚಿಸಿ ಹೋಗಿದ್ದರೂ ಇದುವರೆಗೆ ಹಾಜರುಪಡಿಸಿಲ್ಲ, ಅಧಿಕಾರಿಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಪಿಜಿಯಲ್ಲಿ ನೀಡುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ನಿವಾಸಿಗಳೇ ನೀರನ್ನು ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಕಲುಷಿತ ನೀರು ಎಂದು ಪರೀಕ್ಷಾ ವರದಿ ಬಂದಿದೆ ಆದರೂ ಅದೇ ನೀರನ್ನು ನಿವಾಸಿಗಳಿಗೆ ನಿತ್ಯ ಕುಡಿಸುತ್ತಿದ್ದಾರೆ.
ಬೇಕಾಬಿಟ್ಟಿ ನಿಯಮ:
ಇನ್ನು ಪಿಜಿಗೆ ದಾಖಲಾಗುವ ಸಮಯದಲ್ಲಿ ಆರು ತಿಂಗಳು ಕನಿಷ್ಟ ಪಿಜಿಯಲ್ಲಿ ವಾಸವಿರಬೇಕು ಎನ್ನುವ ನಿಯಮಕ್ಕೆ ಸಹಿ ಹಾಕಿಕೊಂಡಿರುವ ಮುಖ್ಯಸ್ಥರು, ಮೊದಲನೇ ತಿಂಗಳ ಬಾಡಿಗೆ ಹಾಗೂ ಕೊನೆಯ ತಿಂಗಳ ಬಾಡಿಗೆಯನ್ನು ಮೊದಲೇ ಪಡೆದುಕೊಂಡಿದ್ದಾರೆ, ಅಕಸ್ಮಾತ್ ಈ ನಡುವೆ ಈ ಅವ್ಯವಸ್ಥೆಗಳನ್ನು ತಾಳಲಾರದೆ ಪಿಜಿ ತ್ಯಜಿಸಿದರೆ ಕೊಟ್ಟಿರುವ ಹಣವನ್ನು ವಾಪಸ್ ನೀಡುವುದಿಲ್ಲ ಎನ್ನುವ ಷರತ್ತು ಹಾಕಿ ದಾಖಲು ಮಾಡಿಕೊಂಡಿದ್ದಾರೆ, ಈ ಅವ್ಯವಸ್ಥೆಯನ್ನು ಸಹಿಸಿಕೊಂಡು ಆರು ತಿಂಗಳು ಇಲ್ಲೇ ಇರಬೇಕಾದ ಪರಿಸ್ಥಿತಿ ಮಹಿಳಾ ನಿವಾಸಿಗಳದ್ದಾಗಿದೆ. ಉತ್ತಮ ಸವಲತ್ತು ನೀಡುತ್ತೇವೆಂದು ಕನಿಷ್ಟ ೭೦೦೦ರೂ.ಗಳಿಂದ ೧೪೫೦೦ರೂ.ಗಳ ವರೆಗೂ ಬಾಡಿಗೆ ಪಡೆಯುತ್ತಿರುವ ಪಿಜಿ ಮುಖ್ಯಸ್ಥರು ಸವಲತ್ತುಗಳನ್ನು ಮಾತ್ರ ಸಮರ್ಪಕವಾಗಿ ನೀಡುತ್ತಿಲ್ಲ.
ಇನ್ನು ಪಿಜಿಗೆ ಸಂಬಂಧಪಟ್ಟ ವಾರ್ಡನ್, ಸೆಕ್ಯುರಿಟಿ ನಿವಾಸಿಗಳಿಗೆ ಗೌರವ ಕೊಡುವುದಿಲ್ಲ, ಹಣ ಪಡೆಯುವುದಲ್ಲದೆ ಅವರು ಹೇಳಿದಂತೆ ಕೇಳಬೇಕು, ಹೊರಗೆ ಹೋದಾಗಲೆಲ್ಲ ಮಾಹಿತಿ ನೀಡಿ ಹೋಗಬೇಕು, ಸಹಿ ಹಾಕಬೇಕು ಎಂದು ಇನ್ನಿಲ್ಲದ  ಕಿರಿಕಿರಿ ನೀಡುತ್ತಿದ್ದು ಇದನ್ನು ನಿತ್ಯ ನಿವಾಸಿಗಳು ಅನುಭವಿಸುತ್ತಿದ್ದಾರೆ, ಮನಬಂದಂತೆ ಹಣ ಪಡೆದುಕೊಂಡು ಸೂಕ್ತ ಸೌಲಭ್ಯ ನೀಡದೆ ನಿವಾಸಿಗಳನ್ನು ಕಡೆಗಣಿಸುತ್ತಿರುವ ಇವರ ಪ್ರವೃತ್ತಿಯಿಂದ ಈಗಾಗಲೇ ಹಲವರು ಹಣ ಹೋದರೆ ಹೋಗಲಿ ಎಂದು ಪಿಜಿ ಖಾಲಿ ಮಾಡಿಕೊಂಡು ಹೋಗಿದ್ದಾರೆ.
ಇಲ್ಲಿನ ಅವ್ಯವಸ್ಥೆಗಳನು ಸರಿಪಡಿಸುವಂತೆ ಬೇಸತ್ತ ಕೆಲ ನಿವಾಸಿಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದು ಈ ವ್ಯಾಪ್ತಿಯ ಪೊಲೀಸ್ ಠಾಣೆ ಎಸೈ ಸುನಿಲ್‌ಕುಮಾರ್ ಅವರು ಪಿಜಿ ಮುಖ್ಯಸ್ಥರನ್ನು ಠಾಣೆಗೆ ಕರೆಸಿ ಸರಿಪಡಿಸುವಂತೆ ಸೂಚನೆಯನ್ನೂ ನೀಡಿದ್ದಾರೆ, ಹಾಗೆಯೇ ಪಿಜಿ ತೊರೆದು ಹೋಗುವವರಿಗೆ ಯಾವುದೇ ಹಣವನ್ನು ಬಾಕಿ ಉಳಿಸಿಕೊಳ್ಳದೆ ಮರುಪಾವತಿಸುವಂತೆ ಸೂಚಿಸಿದ್ದಾರೆ ಆದರೂ ಯಾವುದಕ್ಕೂ ಇವರು ತಲೆಕೆಡಿಸಿಕೊಂಡಿಲ್ಲ.
ಮಹಿಳೆಯರು ವಾಸವಿರುವ ಪಿಜಿಯಲ್ಲಿ ಮನೋರಂಜನೆ ನೀಡುವ ನೆಪವೊಡ್ಡಿ ಇವರದೇ ಪುರುಷರ ಪಿಜಿಯಲ್ಲಿ ವಾಸವಿರುವ ಪುರುಷರನ್ನು ಮಹಿಳೆಯರ ಪಿಜಿಗೆ ಕರೆಸಿ ಪಾರ್ಟಿ ಆಯೋಜನೆ ಮಾಡಿದ್ದಾರೆ, ಇದರಿಂದ ಸಾಕಷ್ಟು ಮುಜುಗರವನ್ನು ಮಹಿಳಾ ನಿವಾಸಿಗಳು ಅನುಭವಿಸಿದ್ದು ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಟ್ಟಾರೆ ದುಬಾರಿ ಹಣ ಪಾವತಿಸಿ ಕನಿಷ್ಟ ಸೌಲಭ್ಯ ಪಡೆಯುತ್ತಿರುವ ಪಿಜಿಯ ಮಹಿಳಾ ಉದ್ಯೋಗಿಗಳಿಗೆ ಮುಖ್ಯಸ್ಥರು ಸೌಲಭ್ಯ ನೀಡದೆ ವಂಚಿಸಿದ್ದು  ಇವರ ವಿರುದ್ದ ಆಹಾರ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಅಲ್ಲಿನ ನಿವಾಸಿಗಳ ಆಗ್ರಹವಾಗಿದೆ.