Belagavi News In Kannada | News Belgaum

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 300 ಕೋಟಿ ಅಕ್ರಮ: ರಾಜಕಾರಣಿಗಳು, ಅಧಿಕಾರಿಗಳೇ ಭಾಗಿ: ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳೇ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 300 ಕೋಟಿ ಅಕ್ರಮ ನಡೆದಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆ ನಡೆಸುತ್ತಿರೋದ್ರಿಂದ ಯಾವುದೇ ಅಕ್ರಮ ಬೆಳಕಿಗೆ ಬರೋದಿಲ್ಲ ಬದಲಾಗಿ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ಈಗ ಕಮಿಷನ್ ಸರ್ಕಾರ ಎಂಬುದು ಜನತೆಗೆ ಗೊತ್ತಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಪೂರ್ಣ ಬೆಂಬಲ ಸಿಕ್ಕಿದೆ. ಭ್ರಷ್ಟರನ್ನು ರಕ್ಷಿಸೋ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ.10ರಷ್ಟು ಕಮೀಷನ್ ಆರೋಪ ಮಾಡಿದ್ದರು. ಈಗ ಅದೇ ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮೀಷನ್ ಆರೋಪ ಕೇಳಿ ಬಂದಿದೆ. ಆ ಬಗ್ಗೆ ತನಿಖೆ ನಡೆಸಬೇಕು. ತನಿಖೆಯಿಂದ ಎಲ್ಲಾ ಬಯಲಾಗಲಿ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಸಚಿವ ಪ್ರಭು ಚೌವ್ಹಾಣ್, ಎಂ.ಎಲ್.ಸಿ ಸಂಕನೂರು ಕೂಡ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದಾರೆ. ಈ ಪರೀಕ್ಷೆಯಲ್ಲಿ 300 ಕೋಟಿ ಡೀಲ್ ವ್ಯವಹಾರ ನಡೆದಿರೋದಾಗಿ ಕೇಳಿ ಬರುತ್ತಿದೆ. ಸಿಐಡಿ ತನಿಖೆಯಿಂದ ಸತ್ಯ ಬಯಲಾಗಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.//////