ಬಯಸಿದವರಿಗೆ ಮಾತ್ರವೇ ಉಚಿತ ವಿದ್ಯುತ್: ಅರವಿಂದ ಕೇಜ್ರಿವಾಲ್

ನವದೆಹಲಿ: ದೆಹಲಿಯಲ್ಲಿ ಅಕ್ಟೋಬರ್ 1ರಿಂದ ಬಯಸಿದವರಿಗೆ ಮಾತ್ರವೇ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ‘ಎಷ್ಟೋ ಜನ ತಾವು ವಿದ್ಯುತ್ ಬಿಲ್ ಪಾವತಿಸಲು ಸಮರ್ಥರಿರುವುದಾಗಿಯೂ, ಉಚಿತ ವಿದ್ಯುತ್ ಅಗತ್ಯ ಇಲ್ಲವೆಂದೂ ನನಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಸಬ್ಸಿಡಿ ಬೇಕೇ, ಬೇಡವೇ ಎಂದು ಶೀಘ್ರದಲ್ಲೇ ಜನರನ್ನು ಕೇಳಲು ನಾವು ನಿರ್ಧರಿಸಿದ್ದೇವೆ. ಅಕ್ಟೋಬರ್ 1 ರಿಂದ ಬಯಸಿದವರಿಗೆ ಮಾತ್ರವೇ ವಿದ್ಯುತ್ ಸಬ್ಸಿಡಿ ನೀಡಲಾಗುವುದು’ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
2019ರ ಆಗಸ್ಟ್2 ರಂದು ದೆಹಲಿಯಲ್ಲಿ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿತ್ತು. ‘200 ಯುನಿಟ್ ವಿದ್ಯುತ್ ಬಳಕೆಗೆ ಸಂಪೂರ್ಣ ಸಬ್ಸಿಡಿ ನೀಡಲಾಗುವುದು. 201 ರಿಂದ 400 ಯುನಿಟ್ ಬಳಕೆದಾರರಿಗೆ ಶೇ 50 ರಷ್ಟು ಸಬ್ಸಿಡಿ ನೀಡಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ತಿಳಿಸಿದ್ದರು.