Belagavi News In Kannada | News Belgaum

ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಬದುಕುವ ವಾತಾವರಣ ನಿರ್ಮಿಸಲು ಸತೀಶ್‌ ಜಾರಕಿಹೊಳಿ ಕರೆ

ಲಕ್ಷೇಶ್ವರದ ಶ್ರೀ ಮಡ್ಲೇರಿ ಸಿದ್ದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ

ಗದಗ: ಸಮುದಾಯದ ಸಮಸ್ಯೆಗಳನ್ನು ನಿವಾರಿಸಲು, ಬದುಕನ್ನು ಹಸನ್ನಾಗಿಸಲು ದೇವಸ್ಥಾನಗಳು ಸದುಪಯೋಗ ಆಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

 

 

ಗದಗ ಜಿಲ್ಲೆಯ ಲಕ್ಷೇಶ್ವರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡ್ಲೇರಿ ಸಿದ್ದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕೆಂದರು.

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿದ್ದು, ಮತ್ತೆ ಪಕ್ಷವನ್ನು ಸಂಘಟಿಸಿದ್ದಲ್ಲಿ  ಇನ್ನಷ್ಟು ರಾಜ್ಯವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೀವು ಒಗ್ಗಟ್ಟಾಗಿ ಮತ್ತೊಮ್ಮೆ ಕಾಂಗ್ರೆಸ್‌ ಸರ್ಕಾರ ರಚಿಸಬೇಕೆಂದು ಕರೆ ನೀಡಿದರು.

ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿ ಹೊಂದಬೇಕು ಎಂದು ಎಲ್ಲ ತಂದೆ-ತಾಯಿಯರ ಆಸೆ ಇರುತ್ತದೆ. ಆದರೆ ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಸರಿಯಲ್ಲ. ಪರೀಕ್ಷೆಗಳಲ್ಲಿ, ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದ್ದು, ಈ ಅಕ್ರಮಗಳನ್ನು ತಡೆಗಟ್ಟಲು ಆಡಳಿತ ನಡೆಸುವ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

 

ದೇವಸ್ಥಾನಗಳು ಓಳ್ಳೆಯ ವಿಚಾರ, ಚಿಂತನೆಗಳನ್ನು ನಡೆಸುವ ಸ್ಥಳಗಳಾಗಬೇಕು. ನೀವು ಕೂಡ ಸಂಘಟನೆಗೆ ಆದ್ಯತೆ ನೀಡಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಕೆ.ಪಾಟೀಲ್‌, ಶಾಸಕಿ ಕುಸುಮಾವತಿ ಶಿವಳ್ಳಿ, ಬಿ.ಆರ್.‌ ಯಾವಗಲ್ಲ್‌, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಎಸ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.