Belagavi News In Kannada | News Belgaum

ಯಶಸ್ವಿನಿ ಯೋಜನೆಗೆ ಮರುಜೀವ: ಅ. 2 ರಂದು ಉದ್ಘಾಟನೆ ಮಾಡಲು ಸರ್ಕಾರ ನಿರ್ಧಾರ

ಬೆಂಗಳೂರು: ಯಶಸ್ವಿನಿ ಯೋಜನೆಗೆ ಮರುಜೀವ ನೀಡಿರುವ ರಾಜ್ಯ ಸರ್ಕಾರ ಅಕ್ಟೋಬರ್ 2 ರಂದು ಉದ್ಘಾಟನೆ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದರು.
2022- 23 ನೆ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಶಸ್ವಿನಿ ಯೋಜನೆಗೆ ಮರು ಚಾಲನೆ ನೀಡುವ ದಿನಾಂಕವನ್ನು ನಿಗದಿಪಡಿಸಿದರು.
ಯಶಸ್ವಿನಿ ಯೋಜನೆ ಹಾಗೂ ಎ.ಬಿ.ಆರ್. ಕೆ ಡ್ಯೂಪ್ಲಿಕೇಷನ್ ಆಗಬಾರದು. ಎ.ಬಿ.ಆರ್.ಕೆ ಅರ್ಜಿಗಳನ್ನು ತಿರಸ್ಕರಿಸಕೂಡದು. ತಜ್ಞರಿಂದ ಅಧ್ಯಯನ ಕೈಗೊಂಡು ತೀರ್ಮಾನ ಕೈಗೊಳ್ಳುವುದು ಎಂದು ಸೂಚಿಸಿದರು.
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸಂಬಂಧಿಸಿದಂತೆ ಆರ್.ಬಿ.ಐ ನಿಯಮಾವಳಿಗಳ ಅಗತ್ಯಗಳಿಗೆ ಅನುಸಾರವಾಗಿ ದಾಖಲೆಗಳನ್ನು ಸಲ್ಲಿಸುವುದು. ಈ ತಿಂಗಳೊಳಗೆ ಕೆಲಸ ಪೂರ್ಣಗೊಳ್ಳಬೇಕು. ಗೋಕಾಕ್, ಬೀದರ್, ಹುಬ್ಬಳ್ಳಿಯಲ್ಲಿ ಸಹಕಾರಿ ವಲಯದ ಆಸ್ಪತ್ರೆಗಳನ್ನು ಬಲಪಡಿಸಲು ಆಸ್ಪತ್ರೆಗಳಿಗೆ ನೆರವು ಒದಗಿಸಲು ಕ್ರಮ ವಹಿಸಬೇಕು. ಅಲ್ಲದೆ, ಸಾಲಮನ್ನಾ ಸಂಬಂಧ 50 ವರ್ಷಗಳ ಹಳೆಯ ಸೊಸೈಟಿಗಳಿಗೆ ನೆರವು ಒದಗಿಸುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.