Belagavi News In Kannada | News Belgaum

ವಿಜಯಪುರ ಒಂದು ರೀತಿಯಲ್ಲಿ ಪಾಕಿಸ್ತಾನ ಇದ್ದಂಗೆ ಇದೆ: ಶಾಸಕ ಯತ್ನಾಳ್‌

ಬೆಳಗಾವಿ: ವಿಜಯಪುರ ಒಂದು ರೀತಿಯಲ್ಲಿ ಪಾಕಿಸ್ತಾನ ಇದ್ದಂಗೆ ಇದೆ. ಅಂತಹ ಕ್ಷೇತ್ರದಲ್ಲಿ ನಾನು ಗೆದ್ದು ಬಂದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾತನಾಡಿದ ಅವರು, ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ರೀತಿ ಐತಿ ಅಂತಹ ಮತ ಕ್ಷೇತ್ರದಲ್ಲಿ ನಾನು ಆರಿಸಿ ಬಂದಿದ್ದೇನೆ. ಏಕೆಂದರೆ ಅವರದ್ದು ಒಂದು ಲಕ್ಷ ವೋಟ್ ಇದ್ದರೆ ನಮ್ಮದು ಒಂದೂವರೆ ಲಕ್ಷ ವೋಟ್‍ಗಳಿವೆ. ನಮ್ಮ ಮಂದಿ ವಿಜಯಪುರದಲ್ಲಿ ಹೊರಗೆ ಬರುತ್ತಿರಲಿಲ್ಲ. ಹೊರಗೆ ಬರದಿದ್ದರೆ ಪಾಕಿಸ್ತಾನ ಆಗುತ್ತದೆ ನೋಡಿ ಅಂತ ಹೇಳಿದ್ದೆ. ಹೀಗಾಗಿ ಹೊರಗೆ ಬಂದು ನನಗೆ ವೋಟ್ ಹಾಕಿ ಗೆಲ್ಲಿಸಿದ್ದಾರೆ ಎಂದಿದ್ದಾರೆ.
ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಎಲ್ಲಾ ಆರಂಭವಾಗುತ್ತದೆ. ಇನ್ನು ಒಂದು ವರ್ಷವಾದರೆ, ಸಾಮೂಹಿಕ ವಿವಾಹ, 151 ಜೋಡಿ ವಿವಾಹ ಮಾಡುತ್ತೇವೆ ಅಂತ ಬರುತ್ತಾರೆ. ಅವರು ನಿಮ್ಮ ಕೈಯಲ್ಲಿ ತಾಳಿ ಕಟ್ಟಿಸಿ ಉದ್ದಾರ ಮಾಡುವುದಕ್ಕೆ ಬರುತ್ತಾರೆ ಅಂದುಕೊಂಡಿದ್ದೀರಾ? ಅಲ್ಲ, ಮುಂದೆ ಎಂಎಲ್‍ಎ ಎಲೆಕ್ಷನ್‍ಗೆ ನಿಲ್ಲಲು ಬರುತ್ತಾರೆ. ನೋಟ್ ಬುಕ್ ವಿತರಣೆ, ತಾಳಿ ಭಾಗ್ಯ ಅಂತ ಮತ್ತೇನೇನೋ ಮಾಡುತ್ತಾರೆ. ಇನ್ನು ಒಂದು ವರ್ಷದಲ್ಲಿ ನಾಟಕ ಪ್ರಾರಂಭವಾಗುತ್ತದೆ. ಯಾರು ಏನೇನು ಭಾಗ್ಯ ಕೊಡುತ್ತಾರೆ ತೆಗೆದುಕೊಳ್ಳಿ. ಆದರೆ ವೋಟ್ ಮಾತ್ರ ಚಲೋ ಭಾಗ್ಯ ಇರುವವರಿಗೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ದಿಢೀರ್ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ಬೆಂಗಳೂರಿನವರು ಬರುತ್ತಾರೆ ನೋಟ್ ಬುಕ್ ವಿತರಣೆ, ಲಗ್ನ ಮಾಡುವುದಕ್ಕೆ ಶುರು ಮಾಡುತ್ತಾರೆ. ನಾಟಕ ಮಾಡುತ್ತೇವೆ ಅಂದರೆ ಹದಿನೈದು ಇಪ್ಪತ್ತು ಸಾವಿರ ಕೊಡುತ್ತಾರೆ. ನಾನು ರೊಕ್ಕ ಬಿಚ್ಚುದಿಲ್ಲ. ಆದರೂ ಮಂದಿ ವೋಟ್ ಹಾಕುತ್ತಾರೆ ಎಂದು ಹೇಳಿದ್ದಾರೆ.