Belagavi News In Kannada | News Belgaum

ಸಿಎಂ ಮಾಡಲು 2,500 ಕೋಟಿ ಕೇಳಿದ್ದು ಯಾರು ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಲು ಎಷ್ಟು ಕೋಟಿ ?

ಬೆಳಗಾವಿ, ಏ, 7 : ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಸಿಎಂ ಮಾಡಲು 2,500 ಕೋಟಿ ಕೇಳಿದ್ದು ಯಾರು ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಲು ಎಷ್ಟು ಕೋಟಿ  ಹಾಗೂ ಯಡಿಯೂರಪ್ಪ ಅವರು ಸಿಎಂ ಆಗಲು ಹೈಕಮಾಂಡಗೆ ಎಷ್ಟು ಕೋಟಿ ದುಡ್ಡು ನೀಡಿದ್ದಾರೆ ಎನ್ನುವದನ್ನು ಬಹಿರಂಗಪಡಿಸಲಿ ಅಥವಾ ಈ ಕುರಿತು ತನಿಖೆ ನಡೆಸಿ ರಾಜ್ಯದ ಜನರ ಮುಂದೆ ಸತ್ಯ ಎನು ಅನ್ನುವದನ್ನು ತಿಳಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಸವಾಲು ಹಾಕಿದರು.

ಶನಿವಾರ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಶಾಸಕ ಬಸನಗೌಡಾ ಪಾಟೀಲ ಅವರು ಸುಮ್ಮನೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡೋದು ಬೇಡ. ಅವರನ್ನು ಸಿಎಂ ಮಾಡಲು ಯಾರು 2500 ಕೋಟಿ ಹಣ ಕೇಳಿದರು, ಎಲ್ಲಿಂದ ಬಂದು ಕೇಳಿದರು,

ಬಿ.ಎಸ್.‌ ಯಡಿಯೂರಪ್ಪ ಎಷ್ಟು ದುಡ್ಡು ಕೊಟ್ಟು ಸಿಎಂ ಆದರೂ ಎಂದು ಬಹಿರಂಗ ಪಡಿಸಲಿ ಮತ್ತು ಬಸವರಾಜ ಬೊಮ್ಮಾಯಿಯವರು ಎಷ್ಟು ದುಡ್ಡು ಕೊಟ್ಟರೂ ಎಂಬುವುದು ರಾಜ್ಯದ, ದೇಶದ ಜನತೆಗೆ ಗೊತ್ತಾಗಲಿ ಎಂದು ಆಗ್ರಹಿಸಿದರು. ಅಲ್ಲದೆ ಈ ದುಡ್ಡು ಬಿಜೆಪಿ ಹೈಕಮಾಂಡ ಕೇಳಿದೆಯಾ ಅಥವಾ ಯಾರು ಕೇಳಿದ್ದರು ಎನ್ನುವದನ್ನು ನಾಡಿನ ಜನರಿಗೆ ತಿಳಿಸಲಿ ಎಂದು ಒತ್ತಾಯಿಸಿದರು.

ನಾನು ಐದು ಪೈಸೆ ಖರ್ಚು ಮಾಡದೇ, ಯಾರಿಗೂ ಒಂದು ಕಪ್ ಚಹ ಸಹಿತ ಕುಡಿಸದೇ ನಾನು ಮುಖ್ಯಮಂತ್ರಿ ಆಗಿದ್ದೆ. ಶಾಸಕಗಾಂಗ ಪಕ್ಷದ ಸಭೆಯಲ್ಲಿ ನನ್ನ ಆಯ್ಕೆ ಮಾಡಿದ್ದರು. ಹೈಕಮಾಂಡ್ ಕೂಡ ನನ್ನನ್ನೇ ಆಯ್ಕೆ ಮಾಡಿತು ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.  ಇನ್ನು ಯತ್ನಾಳ ಅವರನ್ನು ಸಿಎಂ ಮಾಡಲು ಯಾರು ದುಡ್ಡು ಕೇಳಿದ್ದಾರೆ ಅಂತಾ ಅವರನ್ನೇ ಕೇಳಿ ಎಂದು ಮಾಧ್ಯಮದವರಿಗೆ ಮಾರ್ಮಿಕವಾಗಿ ತಿಳಿಸಿದರು.

ಮೋದಿ, ಬೊಮ್ಮಾಯಿಯಿಂದ ಕೊವೀಡ್ ಮತಣದ ಕುರಿತು ಸುಳ್ಳು ಹೇಳಿಕೆ  ;

ಭಾರತದಲ್ಲಿ 47 ಲಕ್ಷ ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ದೇಶದ ಜನತೆಗೆ ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು, ಕೋವಿಡ್‌ ನಿಂದ ಸಾವನ್ನಪ್ಪಿದ್ದವರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಇನ್ನೂ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್‌ ನಿಂದ ಎಷ್ಟು ಜನ ಸತ್ತಿದ್ದಾರೆ ಎಂದು ಸರಿಯಾಗಿ ಮಾಹಿತಿ ನೀಡಲಿ. ಅವರ ಕುಟುಂಬಸ್ಥರಿಗೆ ಪರಿಹಾರ ನೀಡಿ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ಪಿಎಸ್‍ಐ ಹಗರಣ : ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಸತ್ಯವಾಗಿದೆ. ಸಚಿವರಿಂದ ಅತ್ಯಂತ ಬೇಜವಾಬ್ದಾರಿ ಹೇಳಿಕೆ ಬರುತ್ತಿವೆ. ಸಚಿವರಾಗಿ ಮುಂದುವರಿಯಲು ಇವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ. ಅವರ ಪಕ್ಷದ ಶಾಸಕರೇ ಕೇಳಿದ್ದು, ಸಚಿವರು ಅಕ್ರಮ ನಡೆದಿದೆ ಎಂದು ಪತ್ರ ಬರೆದರೂ ಕೂಡ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸತ್ಯಹರಿಶ್ಚಂದ್ರನಂತೆ ಮಾತನಾಡಿದ್ರೆ ಹೇಗೆ.? ಅಶ್ವತ್ಥನಾರಾಯಣ ಹಾಗೂ ಆರಗ ಜ್ಞಾನೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕು ಕಿಡಿಕಾರಿದರು.

ಪಿಎಸ್‍ಐ ಅಕ್ರಮ ಪರೀಕ್ಷೆ ಕೇಸ್ ತನಿಖೆಯನ್ನು ಪೊಲೀಸರೇ ಮಾಡಲಿ. ಆದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ. ಅಶ್ವತ್ಥನಾರಾಯಣ ಸಂಬಂಧಿಕ ಓರ್ವ ಆಯ್ಕೆಯಾಗಿದ್ದಾನೆ. ಪೊಲೀಸರು ಅವನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಕಳಿಸಿ ಬಿಟ್ಟಿದ್ದಾರೆ. ಇನ್ನುಳಿದವರನ್ನು ಜೈಲಿಗೆ ಹಾಕಿದ್ದಾರೆ. ಹೀಗಾಗಿ ಸಿಐಡಿ ಅವರ ಮೇಲೆ ಅಶ್ವತ್ಥನಾರಾಯಣ ತಮ್ಮ ಪ್ರಭಾವ ಬೆಳೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಇದೇ ವೇಳೆ ಡಿ.ಕೆ. ಸುರೇಶ್ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದರ ಬಗ್ಗೆ ನನಗೆ ಗೊತ್ತಿಲ್ಲ. ನೀವು ಸುರೇಶ ಅವರನ್ನೇ ಕೇಳಬೇಕು. ಯಾರೇ ತಪ್ಪು ಮಾಡಿದ್ರೂ, ನಾನು ತಪ್ಪು ಮಾಡಿದ್ರೂ ತಪ್ಪೆ. ಕಾನೂನು ಪ್ರಕಾರ ತಪ್ಪು ಮಾಡಿದ್ರೆ ಶಿಕ್ಷೆ ಆಗಲೇಬೇಕು. ಸತ್ಯ ಅಸತ್ಯ ಗೊತ್ತಾಗಬೇಕಾದ್ರೆ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

2023ಕ್ಕೆ ಭ್ರಷ್ಟ, 40 ಪರ್ಸೆಂಟ್ ಕಮಿಷನ್ ಸರ್ಕಾರದ ವಿರುದ್ಧ ಜನರ ಬಳಿ ಹೋಗುತ್ತೇವೆ. ನಾವು ಮಾಡಿರುವ ಕೆಲಸ ಬಿಟ್ಟು ಇವರು ಏನೂ ಮಾಡಿಲ್ಲ. ಇನ್ನು ಮಹದಾಯಿಗಾಗಿ ಪಾದಯಾತ್ರೆ ಬಗ್ಗೆ ಯಾವ ರೀತಿ ಮಾಡಬೇಕು ಎಂದು ಚರ್ಚಿಸಿದ್ದೇವೆ. ಇನ್ನು ಮೋದಿ ಅಧಿಕಾರದಲ್ಲಿ ಇರೋವರೆಗೂ ಗ್ಯಾಸ್ ಬಿಟ್ಟು ಜನ ಒಲೆಗೆ ಬರುತ್ತಾರೆ ಎಂದು ಇದೇ ವೇಳೆ ಬೆಲೆ ಏರಿಕೆ ಬಗ್ಗೆ

ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

ಪಿಎಸ್‍ಐ ಪರೀಕ್ಷೆಯಲ್ಲಿ ಕಿಂಗ್‍ಪಿನ್ ಯಾರು ಅಂತಾ ಗೊತ್ತಾದ್ರೆ ಸರ್ಕಾರವೇ ಪತನ ಆಗುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿಯನ್ನು ಬಿಟ್ಟಾಕಿ, ಕುಮಾರಸ್ವಾಮಿ ಅವರ ಯಾವುದೇ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೋಡೋದಿಲ್ಲ. ಸುಳ್ಳು ಹೇಳುವವರಿಗೆ ನಾನು ಉತ್ತರ ಕೊಡೋದಿಲ್ಲ ಎಂದು ಟಾಂಗ್ ಕೊಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಗಣೇಶ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಎ.ಬಿ. ಪಾಟೀಲ್, ಮಾಜಿ ಶಾಸಕ ಶಾಮ್ ಘಾಟಗೆ, ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ,  ಕಾಂಗ್ರೆಸ್‌ ಮುಖಂಡರಾದ ಗಜಾನನ ಮಂಗಸೂಳಿ, ಮಹಾವೀರ ಮೋಹಿತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.