Belagavi News In Kannada | News Belgaum

ಕೇಂದ್ರ ಕಾರಾಗೃಹ, ಬೆಳಗಾವಿಯಲ್ಲಿ ಕೋವಿಡ್ ಜಾಗೃತಿ ಕುರಿತು ಡಾಃ ಚಾರಿನಿ ಇವರಿಂದ ಉಪನ್ಯಾಸ ಕಾರ್ಯಕ್ರಮ

ಕೇಂದ್ರ ಕಾರಾಗೃಹ, ಬೆಳಗಾವಿಯಲ್ಲಿ ಕೋವಿಡ್ ಜಾಗೃತಿ ಕುರಿತು ಡಾಃ ಚಾರಿನಿ ಇವರಿಂದ ಉಪನ್ಯಾಸ ಕಾರ್ಯಕ್ರಮ
ದಿನಾಂಕ 09-05-2022 ರಂದು ಕೇಂದ್ರ ಕಾರಾಗೃಹ, ಬೆಳಗಾವಿಯಲ್ಲಿ ಕೋವಿಡ್ 4ನೇ ಅಲೆಯ ನಿಮಿತ್ತ ಡಾಃ ಚಾರಿನಿ, ಜಿಲ್ಲಾ ಕೋವಿಡ್ ಪರಿವೀಕ್ಷಣಾಧಿಕಾರಿಗಳು, ಕೋಲಾರ ಜಿಲ್ಲೆ ಇವರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಕಾರಾಗೃಹದ ಮುಖ್ಯ ಅಧೀಕ್ಷಕರಾದ ಶ್ರೀ. ಕೃಷ್ಣಕುಮಾರ್ ಉಪಸ್ಥಿತರಿದ್ದರು.

ಡಾಃ ಚಾರಿನಿ ಇವರು ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ, ಕರೋನಾ ರೋಗವು ಇಡೀ ಜಗತ್ತನ್ನೆ ತಲ್ಲಣಗೊಳಿಸಿತ್ತು. ಅನೇಕ ಜನರು ಈ ರೋಗಕ್ಕೆ ತುತ್ತಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಅದರ ಪ್ರಮಾಣ ಕಡಿಮೆಯಾಗಿದ್ದುರೂ ನಾವೆಲ್ಲರೂ ತುಂಬಾ ಜಾಗೃತೆಯಿಂದ ಇರಬೇಕು. ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದು ಹೇಳಿದರು. ಅಲ್ಲದೆ ಯಾವುದೇ ರೋಗವು ಬರದಂತೆ ಇರಲು ನಾವೆಲ್ಲರೂ ವೈಯಕ್ತಿಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ನಂತರ ನಾವು ವಾಸಿಸುವ ಪರಿಸರದ ಸ್ವಚ್ಛತೆ ಬಗ್ಗೆ ಗಮನಕೊಡಬೇಕು ಹಾಗೂ ಸಮತೋಲನ ಆಹಾರ ಸೇವಿಸಬೇಕು, ಅಲ್ಲದೆ ಹೆಚ್ಚಾಗಿ ಹಣ್ಣು ಹಂಪಲು ಸೇವಿಸಬೇಕು ಎಂದು ಹೇಳಿದರು.

 

ಎಲ್ಲಕ್ಕಿಂತ ಮುಖ್ಯವಾಗಿ ತಂಬಾಕು ಸೇವನೆ ತ್ಯಜಿಸಬೇಕು. ಅತೀಯಾದ ತಂಬಾಕು ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ತುತ್ತಾಗಬಹುದು. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿರುವ ವಿಶೇಷ ತಜ್ಞ ವೈದ್ಯರ ಸಮಾಲೋಚನೆಯಿಂದ ತಂಬಾಕು ಸೇವೆನೆಯಿಂದ ಮುಕ್ರರಾಗಬಹುದು. ಜಾಗತಿಕವಾಗಿ ತಂಬಾಕು ಸೇವಿಸುವವರ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇಂದು ತಂಬಾಕು ಪದಾರ್ಥ ಉತ್ಪಾದಿಸುವ ಅನೇಕ ಕಂಪನಿಗಳು ಆಹಾರ ಪದಾರ್ಥಗಳ ಉತ್ಪಾದನೆಯತ್ತ ಒಲವು ತೋರುತ್ತಿವೆ. ಕಾರಣ ತಾವೆಲ್ಲರೂ ಸ್ವ-ಇಚ್ಛೆಯಿಂದ ತಂಬಾಕು ಸೇವನೆ ತ್ಯಜಿಸಿ ಆರೋಗ್ಯವಂತರಾಗಿ ಬಾಳಿ. ತಮ್ಮ ಕುಟುಂಬಕ್ಕೆ ಹಾಗೂ ದೇಶಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.

 

 

ಶ್ರೀ. ಕೃಷ್ಣಕುಮಾರ್, ಮುಖ್ಯ ಅಧೀಕ್ಷಕರು ಇವರು ಮಾತನಾಡಿ ತಾವೆಲ್ಲ ತಮ್ಮ ಜೀವನದಲ್ಲಿ ನಡೆದ ಆಕಸ್ಮಿಕ ಘಟನೆಗೆ ಒಳಗಾಗಿ ತಿಳಿದೋ ಅಥವಾ ತಿಳಿಯದೆಯೇ ತಪ್ಪು ಮಾಡಿರಬಹುದು. ಅದಕ್ಕೆ ಚಿಂತಿಸಿ ಫಲವಿಲ್ಲ. ಮುಂದಿನ ಭಾವಿ ಜೀವನದ ಬಗ್ಗೆ ವಿಚಾರ ಮಾಡಬೇಕು. ತಾವೆಲ್ಲ ಸಕಾರಾತ್ಮಕವಾಗಿ ವಿಚಾರ ಮಾಡಬೇಕು. ತಮ್ಮಲ್ಲಿರುವ ದುಶ್ಚಟಗಳನ್ನು, ಕೆಟ್ಟ ಗುಣಗಳನ್ನು ತ್ಯಜಿಸಿ ಉತ್ತಮರಾಗಬೇಕು. ಇದನ್ನೆ ಭಗವಾನ್ ಬುದ್ಧರು ತಮ್ಮ ಪಂಚಶೀಲ ತತ್ವಗಳಲ್ಲಿ ಒತ್ತಿ ಹೇಳಿದ್ದಾರೆ. ಇಡೀ ಜಗತ್ತಿನಲ್ಲಿರುವ ಎಲ್ಲರೂ ಒಂದೇ ತಾಯಿಯ ಮಕ್ಕಳಿದ್ದಂತೆ, ಸಹೋದರರಿದ್ದಂತೆ ಎಂದು ಹೇಳಿ ಸಮಾಜದ ಅಭ್ಯುದಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿ ಬುದ್ಧ. ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದರೂ ಎಲ್ಲ ಧರ್ಮಗಳ ಸಾರ ಒಂದೇ.

ತಂದೆ ತಾಯಿಗಳ ಪ್ರೀತಿ ಅತೀ ಮುಖ್ಯವಾದದ್ದು. ತಾವೆಲ್ಲ ಭೂತಕಾಲದ ಬಗ್ಗೆ ಚಿಂತಿಸದೇ ಯೋಗ, ಧ್ಯಾನ, ಪ್ರಾರ್ಥನೆಗಳಲ್ಲಿ ಪಾಲ್ಗೊಂಡು ವ್ಯಸನಮುಕ್ತ ದೇಹ ಹೊಂದಿ ಬೇಗನೆ ಬಿಡುಗಡೆಯಾಗಿ ಸಮಾಜದಲ್ಲಿ ಉತ್ತಮರಾಗಿ ಬಾಳಿರಿ ಎಂದು ಪ್ರೇರನಾರ್ಥಕ ನುಡಿಗಳನ್ನು ಹೇಳಿದರು. ಬಂದಿ ನಿವಾಸಿಗಳ ಮನ ಸೆಳೆದರು. ಕಾರ್ಯಕ್ರಮದಲ್ಲಿ ಕಾರಾಗೃಹದ ಬಂದಿ ನಿವಾಸಿಗಳು ಹಾಗೂ ಕಾರಾಗೃಹದ ಸಿಬ್ಬಂದಿಗಳು ಮತ್ತು ಸಹಾಯಕ ಅಧೀಕ್ಷಕರಾದ ಶ್ರೀ. ಶಹಾಬುದ್ದೀನ ಕಾಲೇಖಾನ್ ಇವರು ಉಪಸ್ಥಿತರಿದ್ದರು.