ಗಾಂಜಾ ಮಾರುತ್ತಿದ್ದವನ ಬಂಧನ 20 ಕೆಜಿ ಗಾಂಜಾ ವಶ

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಒರಿಸ್ಸಾ ಮೂಲದ ವ್ಯಕ್ತಿಯನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿ ಸುಮಾರು 20 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶೇಷಾದ್ರಿಪುರಂ, ಕುಮಾರಪಾರ್ಕ್ ವೆಸ್ಟ್ ಸಮೀಪದ ಸುಬ್ರಮಣ್ಯಸ್ವಾಮಿ ಆರ್ಚ್ ಹತ್ತಿರದ ಗಾಂಧಿ ಶಾಲೆಯ ಪಕ್ಕದ ಬಿಬಿಎಂಪಿ ಆಟದ ಮೈದಾನದಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಸಾಧಾರಣ ಮೈಕಟ್ಟಿನ ವ್ಯಕ್ತಿ ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದೆ.
ತಕ್ಷಣ ಇನ್ಸ್ಪೆಕ್ಟರ್ ಎಂ.ಎಸ್. ರವಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಒಡಿಸ್ಸಾ ಮೂಲದ ಶಾಮಾನಂದ್ ದಿಗಲ್(30)ನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಲಗೇಜ್ ಬ್ಯಾಗ್ಗಳನ್ನು ಪರಿಶೀಲಿಸಿದಾಗ ತಲಾ 2 ಕೆ.ಜಿ. ತೂಕದ 10 ಪ್ಯಾಕೆಟ್ಗಳಲ್ಲಿದ್ದ 20 ಕೆ.ಜಿ. ಗಾಂಜಾ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ಎರಡು-ಮೂರು ಬಾರಿ ಆರೋಪಿಯು ಬೆಂಗಳೂರಿಗೆ ಆಗಮಿಸಿದ್ದು, ಮಾದಕ ವಸ್ತು ಗಾಂಜಾವನ್ನು ರಫೀಕ್ ಎಂಬುವವನಿಗೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ಶೇಷಾದ್ರಿಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎನ್. ಚಂದನ್ಕುಮಾರ್ ಮಾರ್ಗದರ್ಶನದಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಸ್. ರವಿರವರ ನೇತೃತ್ವದಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿರುತ್ತಾರೆ. ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಶ್ಲಾಘಿಸಿದ್ದಾರೆ.