Belagavi News In Kannada | News Belgaum

ವಿವಿಧ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ ಸ್ಮಾರ್ಟ ಸಿಟಿ ಆಗುತ್ತಿದ್ದರೂ ಕೂಡ ಇನ್ನು ಹಲವಾರು ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯಕ್ಕಾಗಿಯೂ ಜನರು ಪರದಾಡುವಂತಹ ಪರಿಸ್ಥಿತಿಯಿದೆ. ಇದೀಗ ನೆಹರು ನಗರದ ಮಹಿಳೆಯರು ತಮ್ಮ ನಗರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಹೌದು ಕುಂದಾನಗರಿ ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯಲ್ಲಿ ಸೇರ್ಪಡೆಯಾದ ನಂತರ ಇನ್ನೇನು ಬೆಳಗಾವಿ ವೇಗವಾಗಿ ಅಭಿವೃದ್ಧಿ ಆಗುತ್ತದೆ, ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಜನರು ಅಂದುಕೊಂಡಿದ್ದರು. ಆದರೆ ಜನರ ನಿರೀಕ್ಷೆ ಹುಸಿಯಾಗಿದೆ.

ನೆಹರು ನಗರದ ಫಸ್ಟ್, ಸೆಕೆಂಡ್, ಥರ್ಡ ಕ್ರಾಸ್ ಅಭಿವೃದ್ಧಿಯಿಂದ ವಂಚಿತವಾಗಿದೆ. ಕುಡಿಯುವ ನೀರು, ಡ್ರೈನೇಜ್, ರಸ್ತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಇಲ್ಲಿನ ಜನ ಅನುಭವಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ಮಹಿಳೆಯರು ಸೋಮವಾರ ಎಪಿಎಂಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪಾಲಿಕೆ ಅಧಿಕಾರಿಗಳು, ನಗರಸೇವಕರು, ಶಾಸಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿದ ಮಹಿಳೆಯರು ಕಳೆದ 15 ವರ್ಷಗಳಿಂದ ನಾವು ಸಮಸ್ಯೆ ಅನುಭವಿಸುತ್ತಿದ್ದೇವೆ. ಸಂಡಾಸ್ ಚೇಂಬರ್ ನೀರು ದೇವಸ್ಥಾನದ ಒಳಗೆ ಹೋಗುತ್ತಿದೆ. ದೇವಸ್ಥಾನಕ್ಕೆ ಹೋಗಬೇಕಾದ್ರೆ ಚಿಂತೆ ಮಾಡಬೇಕಾಗುತ್ತಿದೆ. ಒಂದು ಮಳೆಯಾದ್ರೆ ಸಾಕು ಎಲ್ಲಾ ನೀರು ರಸ್ತೆ ಮೇಲೆ ಹರಿದು, ಮನೆ ಒಳಗೆ ನುಗ್ಗುತ್ತಿದೆ. ಸರಿಯಾಗಿ ನೀರು ಬರುತ್ತಿಲ್ಲ. ಕಾರ್ಪೋರೇಟರ್ ಇದ್ದು ಇಲ್ಲದಾಗಿದೆ ನಮಗೆ. ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಬರುತ್ತಾರೆ. ಆಮೇಲೆ ಗೆದ್ದ ನಂತರ ನಮ್ಮ ಕಡೆ ಸುಳಿಯುವುದೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸ್ಥಳಕ್ಕೆ ಪಾಲಿಕೆ ಆಯುಕ್ತರು ಭೇಟಿ ನೀಡಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾನಿರತ ಮಹಿಳೆಯರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಭಿಯಂತ ಲಕ್ಷ್ಮೀ ನಿಪ್ಪಾಣಿಕರ್ ಅವರು ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ನಿಮ್ಮ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದರು. ಲಕ್ಷ್ಮೀ ನಿಪ್ಪಾಣಿಕರ್ ಭರವಸೆ ಮೇರೆಗೆ ಮಹಿಳೆಯರು ಪ್ರತಿಭಟನೆಯನ್ನು ಹಿಂಪಡೆದಿದ್ದು. ಮುಂದೆ ತಮ್ಮ ಬೇಡಿಕೆ ಈಡೇರದಿದ್ರೆ ಮತ್ತೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿಯ ಹಲವಾರು ಪ್ರದೇಶಗಳಲ್ಲಿ ಇದೇ ರೀತಿಯಾದ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಇವುಗಳನ್ನು ಪರಿಹರಿಸುವತ್ತ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ.