Belagavi News In Kannada | News Belgaum

ಕೂಲಿಕಾರರಿಗೆ ವರದಾನ-ಸಚಿವ ಕತ್ತಿ ಯೋಜನೆಯಡಿ 100 ದಿನ ಪೂರೈಸಿದ ಕುಟುಂಬಗಳಿಗೆ ಬೇಸಿಗೆ ಸಲಕರಣೆ ವಿತರಣೆ

ಹುಕ್ಕೇರಿ : ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಜನರ ಅಭಿವೃದ್ಧಿಗೆ ಹಾಗೂ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಇರುವ ಪ್ರಮುಖ ಅಸ್ತ್ರವಾಗಿದ್ದು ಗ್ರಾಮೀಣ ಜನರಿಗೆ ವರದಾನವಾಗಿದೆ ಎಂದು ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.

ತಾಲೂಕಿನ ಹಿಡಕಲ್ ಡ್ಯಾಮ್ ಬಳಿ ಮಂಗಳವಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಂಡ ಹೊಸ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಬಳಿಕ, 100 ಮಾನವ ದಿನಗಳನ್ನು ಪೂರೈಸಿದ ಕಾರ್ಮಿಕರಿಗೆ ಬೇಸಿಗೆ ಸಂರಕ್ಷಣಾ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.

ತಾಲೂಕಿನ ಗ್ರಾಮೀಣ ಜನರು ಅವರ ಗ್ರಾಮದಲ್ಲಿಯೇ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು. ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂಥ ಸ್ವತ್ತುಗಳ ನಿರ್ಮಾಣ ಸೇರಿದಂತೆ ಮತ್ತಿತರ ಸಾರ್ವಜನಿಕ ಆಸ್ತಿಗಳನ್ನು ಸೃಜಿಸುವ ಅವಕಾಶವಿದೆ ಎಂದು ಅವರು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮಾತನಾಡಿ, ಈ ಯೋಜನೆಯ 2020-21 ನೇ ಸಾಲಿನ ನೊಂದಾಯಿತ 100 ದಿನ ಪೂರೈಸಿದ ಕೂಲಿಕಾರರ ಕುಟುಂಬಗಳಿಗೆ ಬೇಸಿಗೆ ಕಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಬಿಸಿಲು ತಡೆಯುವ ಟೋಪಿ ಹಾಗೂ ಅಂಗಿಗಳನ್ನು ವಿತರಿಸುವ ಮೂಲಕ ಕೂಲಿಕಾರರನ್ನು ಪ್ರೋತ್ಸಾಹಿಸಲಾಗುತ್ತಿದೆ. ತಾಲೂಕಿನ 5733 ಕುಟುಂಬಗಳಿಗೆ ಈ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ರಾಜಶೇಖರ ಪಾಟೀಲ, ತಹಸೀಲದಾರ ಡಾ.ಡಿ.ಎಚ್.ಹೂಗಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿ.ಸಿ.ಮಿಶ್ರಿಕೋಟಿ, ಎಡಿಎಲ್‍ಆರ್ ಹೆಗಡೆ, ಮುಖಂಡರಾದ ಬಸವರಾಜ ಮಟಗಾರ, ಎಲ್.ಎಸ್.ತಳವಾರ ಮತ್ತಿತರರು ಉಪಸ್ಥಿತರಿದ್ದರು.