Belagavi News In Kannada | News Belgaum

ಸ್ತ್ರೀ ಕುಲದ ಆದರ್ಶ ಹೇಮರಡ್ಡಿ ಮಲ್ಲಮ್ಮ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಉತ್ಸವ

ಬೆಳಗಾವಿ, ಮೇ 10: ಅನೇಕ ಸವಾಲುಗಳ ನಡುವೆಯೂ ಸ್ತ್ರೀ ಶಕ್ತಿಯ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟ ಸ್ತ್ರೀ ಕುಲದ ಆದರ್ಶ ಮಹಿಳೆ ಎಂದರೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ(ಮೇ 10) ನಗರದ ರಡ್ಡಿ ಭವನದಲ್ಲಿ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಉತ್ಸವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮಳು ತನ್ನ ಎಲ್ಲ ಕುಟುಂಬ ಸಮಸ್ಯೆಗಳಿಗೆ ಹೆದರದೆ, ಸಾಧಿಸುವ ಚಲ ಇರಬೇಕು ಎಂದು ಶಿವನನ್ನು ಒಲಿಸಿಕೊಂಡು ಶಿವಶರಣೆಯಾಗಿ ಹೊರಹೊಮ್ಮಿದರು.   ಎಲ್ಲ ಮಹಿಳೆಯರು ಅವರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಸಂಸ್ಕಾರ, ಆಚಾರ-ವಿಚಾರಗಳು ಮರೆಯಾಗುತ್ತಿವೆ. ಹೇಮರಡ್ಡಿ ಮಲ್ಲಮ್ಮಳಂತಹ ಮಹನೀಯರ ಆಲೋಚನೆ, ಚಿಂತನೆಗಳನ್ನು ಪ್ರತಿಯೊಬ್ಬರು ಅನುಸರಿಸಿ ನಡೆದರೆ ಉತ್ತಮ ಗುಣಮಟ್ಟದ ಸಮಾಜ ನಿರ್ಮಾಣ ಆಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಗೋವಿಂದಪ್ಪ ಗೌಡಪ್ಪಗೋಳ ಅವರು ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಜಯಂತಿಯ ಮಾಡುವುದರ ಮೂಲ ಉದ್ದೇಶ ಮಹಿಳೆಯಲ್ಲಿ ಆತ್ಮ ಸ್ಥೈರ್ಯ ತುಂಬುವುದಾಗಿದೆ ಎಂದರು.
ಎಲ್ಲರಂತೆ ಬದುಕಿದರೇ ಸಮಾಜ, ಇತಿಹಾಸ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ತನಗಾಗಿ ಬದುಕದೇ, ತನ್ನ ಕುಟುಂಬಕ್ಕಾಗಿ ಬದುಕದೇ ಲೋಕಕಲ್ಯಾಣಕ್ಕಾಗಿ ಯಾರು ಬದುಕುತ್ತಾರೋ ಅವರ ಹೆಸರು ಇತಿಹಾಸದಲ್ಲಿ ಉಳಿಯುತ್ತದೆ, ಅಂತವರ ಸಾಲಿನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳು ಎಂದರು
ಹೇಮರಡ್ಡಿ ಮಲ್ಲಮ್ಮಳು ಕೇವಲ ರಡ್ಡಿ ಸಮುದಾಯಕ್ಕೆ ಸೀಮಿತವಾಗಿಲ್ಲ; ಯಾವುದೇ ಒಂದು ಸಮಾಜಕ್ಕೇ ಸೀಮಿತವಾಗಿಲ್ಲ ಅವರು ಇಡೀ ಮನುಕುಲಕ್ಕೆ ಸೇರಿದ್ದಾರೆ. ಸಂಸಾರದಲ್ಲಿ ಬಂದಂತ ಎಲ್ಲ ನೋವನ್ನು ನುಂಗಿ, ಲೋಕ ಕಲ್ಯಾಣದ ಭವಿಷ್ಯದ ಬಗ್ಗೆ ಚಿಂತನೆ ಮಾಡಿ  ಮನುಕುಲದ ಆಸ್ತಿಯಾಗಿದ್ದಾರೆ ಎಂದು ಹೇಳಿದರು.
ಧರ್ಮನಿಷ್ಠೆಯಿಂದ ಸೇವೆ ಮಾಡಿ, ಪತಿಯೇ ಪರಮ ದೈವ ಎಂದು ಸತಿಶಿರೋಮಣಿಯಾಗಿ, ಎಲ್ಲ ಸ್ತ್ರೀ ಸಮಾಜದ ಅಭಿವೃದ್ದಿಗೆ ನಾಂದಿ ಹಾಡಿದ ಮಹಾಯೋಗಿ, ಮಹಾಜ್ಞಾನಿ ಮಹಿಳೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಅವರು ತಿಳಿಸಿದರು.
ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಭಾವಚಿತ್ರ ಮೆರವಣಿಗೆ :
ಇದಕ್ಕೂ ಮುಂಚೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಭಾವಚಿತ್ರ ಮೆರವಣಿಗೆ ಹಲವು ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಚನ್ನಮ್ಮ ವೃತ್ತದ ಮಾರ್ಗವಾಗಿ ಸದಾಶಿವ ನಗರದಲ್ಲಿರುವ ರಡ್ಡಿ ಭವನದವರೆಗೆ ಮೆರವಣಿಗೆ ಸಾಗಿತು.
ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ್ ಗಾಳಿ ಅವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಸ್ವಾಗತಿಸಿದರು.
ಮಹಾನಗರ ಪಾಲಿಕೆಯ ಉಪ ಆಯುಕ್ತ(ಆಡಳಿತ)ರಾದ ಭಾಗ್ಯಶ್ರೀ ರಾ. ಹುಗ್ಗಿ, ಬೆಳಗಾವಿ ರಡ್ಡಿ ಸಮುದಾಯದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷರಾದ ಬಸವರಾಜ ಬಾವಲತ್ತಿ ಹಾಗೂ ರಡ್ಡಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.