Belagavi News In Kannada | News Belgaum

ನಿವೇಶನ/ಮನೆಗಳಿಗೆ ಉತಾರ ನೀಡುವಂತೆ ಆಗ್ರಹಿಸಿ ಮನವಿ

ಬೆಳಗಾವಿ: ಬೆಳಗಾವಿಯ ಖಾಸಬಾಗ, ವಡಗಾವಿ ಭಾಗದಲ್ಲಿ ಬಾಂಡ್ ಮೇಲೆ ಖರೀದಿ ಮಾಡಿದ ನಿವೇಶನ/ಮನೆಗಳಿಗೆ ಹಿಂದಿನಂತೆ ಉತಾರ ನೀಡುವಂತೆ ಆಗ್ರಹಿಸಿ “ನೇಕಾರ ಕಾರ್ಮಿಕರ ಬಳಗ”ದ  ವತಿಯಿಂದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ನಗರದ ಬಹುತೇಕ ಪ್ರದೇಶಗಳು ಬಾಂಡ್ ಮೇಲೆ ಖರೀದಿಸಿದ ಮನೆ/ನಿವೇಶನಗಳಿಂದಲೇ ನಿರ್ಮಾಣವಾಗಿದೆ. 30-40 ವರ್ಷಗಳಿಂದ ಬಾಂಡ್ ಮೇಲೆ ಖರೀದಿಸಿದ ಮನೆಗಳಿಗಳ ಮೇಲೂ ಮಹಾನಗರ ಪಾಲಿಕೆ ನಿರಂತರವಾಗಿ ಕರ ಅಕರಣೆ ಮಾಡುತ್ತಿದೆ. ಅದಕ್ಕೆ ಈ ಹಿಂದೆ ಪಾಲಿಕೆಯಿಂದ ಉತಾರ ಕೊಡುವ ವ್ಯವಸ್ಥೆಯೂ ಇತ್ತು. ಈ ಉತಾರದಿಂದ ಬಡವರು, ನೇಕಾರ ಕಾರ್ಮಿಕರಿಗೆ ಕನಿಷ್ಠ ಸೊಸೈಟಿಗಳಲ್ಲಿ ಸಾಲ ಸೌಲಭ್ಯ, ಹಲವು ಸರಕಾರಿ ಸೌಲಭ್ಯ ಸಿಗುತ್ತಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಿಂದ ಇದ್ದಕ್ಕಿದ್ದ ಹಾಗೆ ಪಾಲಿಕೆಯಿಂದ ಇಂತಹ ಜಾಗ/ಮನೆಗಳಿಗೆ ಉತಾರ ನೀಡುವುದನ್ನು ನಿಲ್ಲಿಸಿದ್ದಾರೆ.

ಇದರಿಂದ ನೇಕಾರ ಕಾರ್ಮಿಕರಿಗೆ, ಬಡ ಕೂಲಿಕಾರ ಕುಟುಂಬಗಳಿಗೆ ಅನಾನುಕೂಲವಾಗಿದೆ. ನೇಕಾರ ಕಾರ್ಮಿಕರಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಉತಾರ ಗಳಿಲ್ಲದೇ ಸಾಲ ಸೌಲಭ್ಯ ಸಿಗದಂತಾಗಿದೆ. ಇದರಿಂದಾಗಿ ನೇಕಾರ ಕಾರ್ಮಿಕರು ಅನಿವಾರ್ಯವಾಗಿ ಹೆಚ್ಚಿನ ಬಡ್ಡಿದರಕ್ಕೆ ಕೈಗಳ ಸಾಲವನ್ನು ಮಾಡಬೇಕಾಗಿದೆ. ಇದರಿಂದ ಸಾಲದ ಹೊರೆ ಹೆಚ್ಚಾಗಿ ಬೆಳಗಾವಿಯಲ್ಲಿ ನೇಕಾರರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಇಂತಹ ಘಟನೆಗಳನ್ನು ತಪ್ಪಿಸಿ ಬಡ ನೇಕಾರ ಕುಟುಂಬಗಳ ಅನುಕೂಲಕ್ಕಾಗಿ ಈ ಮೊದಲಿನಂತೆ ಬಾಂಡ್ ಮೇಲಿನ ಮನೆ/ನಿವೇಶನಗಳಿಗೂ ಉತಾರ ನೀಡುವಂತೆ ಆಯುಕ್ತರಲ್ಲಿ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಸಾಗರ ಸಾತ್ಪುತೆ, ನಾಗರಾಜ ಬೆಟಗೇರಿ, ಮಂಜುನಾಥ ಸಾತ್ಪುತೆ, ಶೇಖರ ಕಾಮಕರ, ಆನಂದ ಬೆಟಗೇರಿ, ಸರಳಾ ಸಾತ್ಪುತೆ ಇದ್ದರು.