Belagavi News In Kannada | News Belgaum

ಮನೆ ಇಲ್ಲದೆ ಇದ್ದ ಕಾರಣ ಸರ್ಕಾರಿ ಜಾಗೆಯಲ್ಲಿ ಗುಡಿಸಲು ಹಾಕಿಕೊಂಡು ಇದ್ದಂತಹ ಜನಾಂಗದವರಿಗೆ ಮನೆ ಹಕ್ಕು ಪತ್ರ ನಿಡುವಂತೆ ಒತ್ತಾಯಿಸಿ ಪ್ರತಿಭಟನೆ

ಬೈಲಹೊಂಗಲ- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮನೆ ಇಲ್ಲದೆ ಇದ್ದ ಕಾರಣ ಸರ್ಕಾರಿ ಜಾಗೆಯಲ್ಲಿ ಗುಡಿಸಲು ಹಾಕಿಕೊಂಡು ಇದ್ದಂತಹ ಜನಾಂಗದವರಿಗೆ ಮನೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ವಾರ್ಡ ನಂ.24ರ ಗಂಗಾ ಗೌರಿ ಮಡ್ಡಿಯ ನಾಗರಿಕರು ಪುರಸಭೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಗಂಗಾ ಗೌರಿ ಮಡ್ಡಿಯ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಡು ಬಡವರಿಗೆ ಮನೆ ಇಲ್ಲದೆ ಇದ್ದ ಕಾರಣ ವಾರ್ಡ ನಂ.24ರ ಗಂಗಾ ಗೌರಿ ಮಡ್ಡಿಯ ಸರಕಾರಿ ಜಮೀನ ರಿ.ಸ.ನಂ. 178 ಕ್ಷೇತ್ರ 11 ಎಕರೆಯಲ್ಲಿ ಸುಮಾರು 200-250 ಗುಡಿಸಲು, ಮನೆಗಳನ್ನು ಹಾಕಿಕೊಂಡು ಹಲವು ವರ್ಷಗಳಿಂದ ವಾಸವಾಗಿದ್ದೇವೆ. ಗುಡಿಸಲು, ಮನೆಗಳಿಗೆ ಪುರಸಭೆಯಿಂದ ಈಗಾಗಲೇ ಕೆಲವು  ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಇಲ್ಲಿಯ ಜನರು ನಿರ್ಗತಿಕರು ಹಾಗೂ ಅತಿ ಬಡವರಾಗಿದ್ದು ಇಲ್ಲಿಯವದರೆಗೆ ಮನೆ ಹಕ್ಕು ಪತ್ರ ವಿತರಣೆ ಮಾಡಿರುವದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾದ ತಾವು ನಮಗೆ ಹಕ್ಕು ಪತ್ರ ವಿತರಣೆ ಮಾಡುವ ಬಗ್ಗೆ ಭರವಸೆ ನೀಡಿದ್ದೀರಿ. ಆದರೆ ಪುನ: ಚುನಾವಣೆ ಬಂದರೂ ಸಹಿತ ಇದುವರೆಗೆ ತಾವು ಹಕ್ಕು ಪತ್ರ ವಿತರಣೆ ಮಾಡುವ ಬಗ್ಗೆ ಯಾವದೇ ರೀತಿ ಗಮನ ನೀಡಿಲ್ಲ. ಈ ಕೂಡಲೇ ಮನೆ ಹಕ್ಕು ಪತ್ರ ವಿತರಣೆ ಮಾಡಬೇಕು. ಇಲ್ಲದಿದ್ದರೆ ಹಕ್ಕು ಪತ್ರ ವಿತರಣೆ ಮಾಡದಿದ್ದಲ್ಲಿ ತಮ್ಮ ಕಛೇರಿಯ ಮುಂದೆ ಅಹೋ ರಾತ್ರಿ ಧರಣಿ ನಡೆಸಿ, ವಾರ್ಡ ನಂ.24ನೇ ವಾರ್ಡಿನಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಪ್ರತಿಭಟನಾಕಾರರು ತಿಳಿಸಿದರು.

ನಿಕಟ ಪೂರ್ವ ಅಧ್ಯಕ್ಷ ಬಾಬು ಕುಡಸೋಮನ್ನವರ, ಮುಖ್ಯಾಧಿಕಾರಿ ಕವಿರಾಜ ನಾಗನೂರ, ಸದಸ್ಯರಾದ  ಅಂಬಿಕಾ ಕೊಟಬಾಗಿ, ವಿಜಯ ಬೋಳನ್ನವರ, ರಾಜಶೇಖರ ಮೂಗಿ, ಗುರು ಮೆಟಗುಡ್ಡ, ಬುಡ್ಡೇಸಾಬ ಶಿರಸಂಗಿ, ಇಂಬ್ರಾಹಿಂಸಾಬ್ ಶಿಲ್ಲೇದಾರ, ಶಿವಣಪ್ಪ ಗೌಡರ, ಭಾರತಿ ಪರಂಡಿ, ಅನ್ನಪೂರ್ಣಾ ಹಂಪನ್ನವರ, ಸಾವಕ್ಕಾ ಕಡಕೋಳ, ನೀಲವ್ವ ಪರಸನ್ನವರ, ಗಂಗಪ್ಪ ಬಡವನ್ನವರ, ಹಣಮಂತ ಸಾಲಳ್ಳಿ, ಅನ್ನಪೂರ್ಣಾ ಮೆಟ್ಟಿ, ಕಮಲವ್ವಾ ಹಾಲಗಿಮರಡಿ ಇನ್ನಿತರರು ಇದ್ದರು.