Belagavi News In Kannada | News Belgaum

ಡೆಂಗೀ, ಮಲೇರಿಯಾ ನಿಯಂತ್ರಣಕ್ಕೆ ಕ್ರಮವಹಿಸಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

“ವಿಶ್ವ ಡೆಂಗೀ ದಿನಾಚರಣೆ ಕುರಿತ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ”

ಬೆಳಗಾವಿ, ಮೇ 11(ಕರ್ನಾಟಕ ವಾರ್ತೆ): “ಡೆಂಗೀ ತಡೆಗಟ್ಟಬಹುದು ಬನ್ನಿ ಎಲ್ಲರೂ ಕೈ ಜೋಡಿಸೋಣ” ಎಂಬ ಘೋಷ ವಾಕ್ಯದೊಂದಿಗೆ ಡೆಂಗೀ, ನಿಯಂತ್ರಣಕ್ಕೆ ಎಲ್ಲರೂ ಶ್ರಮ ವಹಿಸಬೇಕು. ಮಲೇರಿಯಾ, ಡೆಂಗೀ ರೋಗಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳನ್ನು ಗುರುತಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು. ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಮೇ.11) ನಡೆದ ವಿಶ್ವ ಡೆಂಗೀ ದಿನಾಚರಣೆ ಕುರಿತ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡೆಂಗೀ, ಚುಕುನ್ ಗುನ್ಯ ಮತ್ತು ಮಲೇರಿಯಾ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಿಗೆ ನಿರಂತರ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಡೆಂಗೀ ಹಾಗೂ ಮಲೇರಿಯಾ ನಿಯಂತ್ರಣ ಕುರಿತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷೆ ಮಾಡಿ, ಸುರಕ್ಷಿತವಲ್ಲದ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನೆಟ್ ಮಾದರಿಯ ವಿಂಡೋ ಪರದೆಗಳ, ವೈಯಕ್ತಿಕ ಮನೆಯ ರಕ್ಷಣಾ ಸಾಧನಗಳನ್ನು ಬಳಸಬಹುದು. ಬಾಗಿಲು ಮತ್ತು ಕಿಟಕಿ ಪರದೆಗಳನ್ನು ಬಳಸಿ ಸುರಕ್ಷಿತವಾಗಿ ಇರಬೇಕು ಎಂದು ಈಗಗಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರೋಗಗಳ ನಿಯಂತ್ರಣ ಅಧಿಕಾರಿಗಳು ವಿವರಿಸಿದರು.
ಡೆಂಗೀ, ಮಲೇರಿಯಾ, ಚಿಕುನ್ ಗುನ್ಯ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು, ಹೂವಿನ ಕುಂಡ, ಬೀಸಾಕಿದ ಟೈರ್‌, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ರೋಗಗಳ ನಿಯಂತ್ರಣ ಅಧಿಕಾರಿಗಳು ತಿಳಿಸಿದರು.
ಡೆಂಗೀ ನಿಯಂತ್ರಣಕ್ಕೆ ಕ್ರಮ:
ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಇದರಿಂದ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸಬಹುದು. ರೋಗಗಳ ತಡೆ ಬಗ್ಗೆ ಸಾರ್ವಜನಿಕರಲ್ಲಿ ನಿರಂತರ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಾಗೃತಿ ಬಿತ್ತಿ ಪತ್ರ ಬಿಡುಗಡೆ:
ಈ ವೇಳೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್. ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಶಶಿಕಾಂತ ಮುಣ್ಯಾಳ ಅವರು ಡೆಂಗೀ, ಮಲೇರಿಯಾ ಹಾಗೂ ಚಿಕುನ್ ಗುನ್ಯ, ನಿಯಂತ್ರಣ ಕುರಿತ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್. ವಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುಣ್ಯಾಳ, ಜಿಲ್ಲಾರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಮ್. ಎಸ್ ಪಲ್ಲೇದ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.