Belagavi News In Kannada | News Belgaum

ಶಟರ್ ಮುರಿದು ಕಳ್ಳತನ; ಅಂತರ್ ರಾಜ್ಯ ಕಳ್ಳರ ಬಂಧನ

ಬಳ್ಳಾರಿ: ಮನೆ ಹಾಗೂ ಅಂಗಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾರನಾಳ ಗ್ರಾಮದ 31 ವರ್ಷದ ಗಂಗಾಧರ್ ಹಾಗೂ 33 ವರ್ಷದ ಗಜೇಂದ್ರ ಬಂಧಿತ ಆರೋಪಿಗಳು. ಕಳೆದ ಮೂರು ದಿನಗಳ ಹಿಂದೆ ಬಳ್ಳಾರಿ ನಗರದ ಕೌಲ್‍ಬಜಾರ್‍ನ ಅಮ್ಮ ಸೂಪರ್ ಬಜಾರ್‌ನ ಶೆಟರ್ ಮುರಿದು ಕಳ್ಳತನ ಮಾಡಿದ್ದರು. ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಐನಾತಿ ಕಳ್ಳರು, ಕಳ್ಳತನ ಮಾಡಿದ ಬಳಿಕ ಸಿಸಿಟಿವಿಯ ಡಿವಿಆರ್ ಕದ್ದು ಪರಾರಿಯಾಗಿದ್ದರು.

ಈ ಸಂಬಂಧ ಸೂಪರ್ ಮಾರ್ಕೆಟ್ ಮಾಲೀಕರಾದ ಡ್ಯಾನಿಯಲ್ ಅವರು ಕೌಲ್‍ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇಬ್ಬರು ಆರೋಪಗಳನ್ನು ಬಂಧಸಿದ್ದಾರೆ. ಬಳಿಕ ಈ ಇಬ್ಬರು ಕಳ್ಳರನ್ನು ವಿಚಾರಣೆ ನಡೆಸಿದಾಗ ಬಳ್ಳಾರಿ ನಗರದಲ್ಲಿ ಎರಡು ಕಳ್ಳತನ ಮಾಡಿದ್ದು, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆ ಇವರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಇದೀಗ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.