27.25 ಎಕರೆ ಭೂಮಿ ಕಬಳಿಸಲು ಸಚಿವ ಶ್ರೀರಾಮುಲು ಹುನ್ನಾರ: ಎಸ್.ಆರ್. ಹಿರೇಮಠ

ಹುಬ್ಬಳ್ಳಿ: ‘ಸಚಿವ ಬಿ. ಶ್ರೀರಾಮುಲು ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಳ್ಳಾರಿಯಲ್ಲಿ 27.25 ಎಕರೆ ಭೂಮಿ ಕಬಳಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.
‘ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು 2022ರಲ್ಲಿ ಶ್ರೀರಾಮುಲು ಅವರು ಈ ಕೃತ್ಯ ಎಸಗಿದ್ದಾರೆ. ಈ ಪೈಕಿ, ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ವಶಪಡಿಸಿಕೊಂಡಿದ್ದ 10 ಎಕರೆ ಭೂಮಿಯೂ ಸೇರಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ನೈಸರ್ಗಿಕ ಸಂಪನ್ಮೂಲಗಳ ರಾಷ್ಟ್ರೀಯ ರಕ್ಷಣಾ ಸಮಿತಿ, ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳಿಗೆ ಶ್ರೀರಾಮುಲು ಅವರ ಈ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು, ಎಲ್ಲಾ ದಾಖಲೆಗಳು ನಕಲಿಯಾಗಿರುವುದು ಖಚಿತವಾಗಿದೆ. ಈ ಕುರಿತು ಸ್ಥಳೀಯರೊಬ್ಬರು ಕೋರ್ಟ್ನಲ್ಲಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಹೇಳಿದರು.
‘ಪ್ರಕರಣದ ತನಿಖೆಯನ್ನು ಸರ್ಕಾರ ಪಾರದರ್ಶಕವಾಗಿ ನಡೆಸಬೇಕು. ಅದಕ್ಕಾಗಿ ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.