Belagavi News In Kannada | News Belgaum

ಆಯಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ನಿವೇಶನ, ಸ್ವಯಂ ಉದ್ಯೋಗಕ್ಕೆ 5 ಲಕ್ಷ ರೂ. ನೆರವು ಘೋಷಿಸಿದ ಸಿಎಂ

ಬೆಂಗಳೂರು: ಆಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಕಷ್ಟಕ್ಕೆ ಮರುಗಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಂತ್ರಸ್ತರಿಗೆ ಉಚಿತ ನಿವೇಶನ ನೀಡುವುದಾಗಿ ಘೋಷಿಸಿದ್ದಾರೆ. ಜತೆಗೆ ಸ್ವಯಂ ಉದ್ಯೋಗಕ್ಕಾಗಿ ಐದು ಲಕ್ಷ ರೂ. ನೆರವು ನೀಡುವುದಾಗಿಯೂ ಅಭಯ ನೀಡಿದ್ದಾರೆ.

ಆಯಸಿಡ್​ ದಾಳಿಗೆ ಒಳಗಾದ ಮಹಿಳೆಯರಿಗೆ ಕೊಡುತ್ತಿದ್ದ ತಲಾ 3 ಸಾವಿರ ರೂ. ಪಿಂಚಣಿಯನ್ನು 10 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಶುಕ್ರವಾರ ಮೂವರು ಮಹಿಳೆಯರಿಗೆ ಸಾಂಕೇತಿಕವಾಗಿ ಪಿಂಚಣಿ ಪತ್ರ ವಿತರಿಸಿದ ಬಳಿಕ ಮಾತನಾಡಿದ ಸಿಎಂ, ಆಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ನಿವೇಶನ ನೀಡುವ ಕೆಲಸ ನಾಳೆಯಿಂದ ಆಗುತ್ತೆ. 5 ಲಕ್ಷ ರೂ. ವರೆಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡುತ್ತೇವೆ. ವಸತಿ ಯೋಜನೆಯಡಿ ಮನೆ ನಿರ್ಮಿಸಲು ತಕ್ಷಣ ಆದೇಶ ಹೊರಡಿಸಲಾಗುತ್ತದೆ ಎಂದು ಶುಕ್ರವಾರ ಹೇಳಿದರು.

ಆಯಸಿಡ್ ದಾಳಿಗೆ ಒಳಗಾದವರ ಬದುಕು ಕಷ್ಟ. ಅವರ ಬಗ್ಗೆ ಯೋಚಿಸಿದರೆ ಸಾಕು ದುಃಖ ಬರುತ್ತದೆ. ಜನ ಅವರಿಂದ ದೂರ ಹೋಗುತ್ತಾರೆ. ಇದು ನನ್ನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅವರ ಬದುಕಿಗೆ ನೆರವಾಗಲೆಂದು ಈ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದರು.//////