Belagavi News In Kannada | News Belgaum

ಕಲಿಕಾ ಚೇತರಿಕೆ ಪ್ರಾರಂಭೋತ್ಸವಕ್ಕೆ ಸ್ಪೂರ್ತಿ ತುಂಬಿದ ಮಕ್ಕಳು

ಮೂಡಲಗಿ: ಶಾಲಾ ಪ್ರಾರಂಭ ಮಹೋತ್ಸವವನ್ನು ನಮ್ಮ ಶಾಲೆಯಲ್ಲಿ ವಿಭಿನ್ನವಾಗಿ ಆಚರಿಸುವದರೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಸಮುದಾಯ ಹಾಗೂ ಜನಪ್ರತಿನಿಧಿಗಳು ಈ ಕಲಿಕಾ ಚೇತರಿಕೆ ವರ್ಷಕ್ಕೆ ಸೂರ್ತಿ ತುಂಬಿದ್ದಾರೆ ಎಂದು ತುಕ್ಕಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಎ.ವಿ. ಗಿರೆಣ್ಣವರ ಹೇಳಿದರು.

ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಉದ್ದೇಶಿ ಮಾತನಾಡಿ, ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸರಿಯಾಗಿ ಬೋಧನಾ ಕಾರ್ಯ ನಡೆಯದೇ ಕುಂಠಿತವಾಗಿದ್ದರಿಂದ ಇಲಾಖೆ ಈ ಕೊರತೆಯನ್ನು ನೀಗಿಸಲು 15 ದಿನಗಳ ಮುಂಚೆ ಶಾಲೆ ಪ್ರಾರಂಭಿಸಿ ಈ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಆಚರಿಸುತಿದೆ. ಹಾಗೂ ಶೈಕ್ಷಣಿಕವಾಗಿ ಹಲವಾರು ಬದಲಾವಣೆಗಳನ್ನು ತಂದಿರುವದರಿಂದ ಅವುಗಳನ್ನು ನಮ್ಮ ಶಿಕ್ಷಕರು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ಹಾಗೂ ಗ್ರಾಮಸ್ಥರು ಪಾಲಕರು ನಮ್ಮ ವಿಭಿನ್ನ ಶೈಕ್ಷಣಿಕ ಚಟುವಟಿಕೆಗಳಿಗೆ ಸ್ಪಂದಿಸುತ್ತಿರುವದು ತುಂಬಾ ಶ್ಲಾಘನೀಯ ಎಂದರು.

ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ ಮಾತನಾಡಿ, ಶಾಲಾ ಪ್ರಾರಂಭೋತ್ಸವವನ್ನು ಸಮುದಾಯದೊಂದಿಗೆ ಹಾಗೂ ವಿಜೃಂಭಣೆಯಿಂದ ಆಚರಿಸಿ ಕಲಿಕಾ ಚೇತರಿಕೆ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಈ ಶಾಲೆಯ ಶಿಕ್ಷಕರ ಕಾರ್ಯ ಮಾದರಿಯಾಗಿದೆ ಎಂದರು.

ಗ್ರಾಪಂ ಮಾಜಿ ಸದಸ್ಯ ಅಜ್ಜಪ್ಪ ಮನ್ನಿಕೇರಿ ಮಾತನಾಡಿ, ಶಿಕ್ಷಕರು ಪತ್ರ ಅಭಿಯಾನದ ಮೂಲಕ ವಿದ್ಯಾರ್ಥಿಗಳನ್ನು ಪ್ರಾರಂಭದಲ್ಲಿಯೇ ತರಗತಿಗೆ ಹಾಜರಾಗುವಂತೆ ಮಾಡಿದ ಕಾರ್ಯ ತುಂಬಾ ಶ್ಲಾಘನೀಯ ಸುಮಾರು 700 ವಿದ್ಯಾರ್ಥಿ ಪಾಲಕರಿಗೆ ಪತ್ರ ಬರೆಯುವ ಮುಖೇನ ವಿನೂತನ ಕಾರ್ಯ ಮಾಡಲಾಗಿದೆ. ಹಾಗೂ ಇವತ್ತಿನ ವಿದ್ಯಾರ್ಥಿಗಳನ್ನು ರಥೋತ್ಸವ ಮಾದರಿಯಲ್ಲಿ ಕರೆದುಕೊಂಡು ಬಂದಿರುವದು ತುಂಬಾ ಅಭಿನಂದನಾರ್ಹ ಎಂದರು.

 

ಕಾರ್ಯಕ್ರಮದಲ್ಲಿ ಕುಂಬ ಮೇಳದೊಂದಿಗೆ ಹಾಗೂ ವಾದ್ಯಗಳೊಂದಿಗೆ ಹೊಸ ವಿದ್ಯಾರ್ಥಿಗಳನ್ನು ಬೆಳ್ಳಿ ರಥದಲ್ಲಿ ಕರೆದುಕೊಂಡು ಬರಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ, ಸದಸ್ಯರಾದ ಸುನಂದಾ ಭಜಂತ್ರಿ, ಪುಂಡಲೀಕ ಬಾಗೇವಾಡಿ, ಸತ್ತೆಪ್ಪ ಮಲ್ಲಾಪೂರ, ಗಂಗಾರಾಮ ಹಮ್ಮನವರ, ತಾಲೂಕಾ ಪಂಚಾಯತ ಮಾಜಿ ಅದ್ಯಕ್ಷರಾದ ಸುಲೋಚನಾ ಮರ್ದಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಸಿದ್ದಪ್ಪ ಹಮ್ಮನವರ, ಮಾಜಿ ಸದಸ್ಯರಾದ ಅಜ್ಜಪ್ಪ ಮನ್ನಿಕೇರಿ.

ಭರಮಪ್ಪ ಉಪ್ಪಾರ, ರೈತ ಮುಖಂಡರಾದ ಮಂಜು ಗದಾಡಿ, ಗುರುನಾಥ ಹುಕ್ಕೇರಿ, ಆನಂದ ಗದಾಡಿ, ಪಿ.ಕೆ.ಪಿ.ಎಸ್ ಮುಖ್ಯ ಕಾರ್ಯನಿರ್ವಾಹಕ ಯಮನಪ್ಪ ಗದಾಡಿ. ಆಶಿರ್ವಾದ ಹುಲಕುಂದ, ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಹುಲಕುಂದ ಹಾಗೂ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.