Belagavi News In Kannada | News Belgaum

ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಸಹನಾ ಬೆಳಗಾವಿಗೆ ಟಾಪರ್

ಬೆಳಗಾವಿ: ಕಿರಾಣಿ ಅಂಗಡಿಯಿಂದ ಜೀವನ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಅವರ ಪುತ್ರಿಯೊಬ್ಬಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಪ್ರತಿಶತ ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ನಿವಾಸಿಗಳಾದ ಮಹಾಂತೇಶ ರಾಯರ್ ಹಾಗೂ ಭಾರತೀ ರಾಯರ್ ಅವರ ಪುತ್ರಿ ಸಹನಾ ಮಹಾಂತೇಶ ರಾಯರ್ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಸತ್ತಿಗೇರಿ ಗ್ರಾಮದ ಸಹನಾ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಈಕೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಸಹನಾ ತಂದೆ ಜೀವನ ನಿರ್ವಹಣೆಗಾಗಿ ಕಿರಾಣಿ ಅಂಗಡಿ ನಡೆಸಿ ಕುಟುಂಬ ಸಾಗಿಸುತ್ತಿದ್ದಾರೆ.
ಈ ಕುರಿತು  ಮಾತನಾಡಿರುವ ಸಹನಾ, ಕೋವಿಡ್-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್‌ಲೈನ್ ತರಗತಿಗೆ ಹಾಜರಾಗಲು ನೆಟ್‌ವರ್ಕ್ ಸಮಸ್ಯೆಯೂ ಕಾಡುತಲಿತ್ತು. ಆದರೂ, ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ನನ್ನ ಶಿಕ್ಷಕರು ಮತ್ತು ಪೋಷಕರು ಸಾಕಷ್ಟು ಪ್ರೋತ್ಸಾಹ ನೀಡಿದರು. ಅವರ ನಿರೀಕ್ಷೆಯಂತೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ./////