Belagavi News In Kannada | News Belgaum

ಬೆಳಗಾವಿಯಲ್ಲಿ ಮಳೆ: ರೈತರ ಬೆಳೆಗಳು ಜಲಾವೃತ

ಬೆಳಗಾವಿ: ನಗರವೂ ಸೇರಿದಂತೆ ‌ಜಿಲ್ಲೆಯ ಬಹುತೇಕ‌ ಕಡೆಗಳಲ್ಲಿ ಮಳೆ ಮುಂದುವರಿದಿದೆ. ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಗಾಂಧಿ ನಗರ ಸಮೀಪದಲ್ಲಿ ಸರ್ವಿಸ್ ರಸ್ತೆ ಕಾಲುವೆ ತುಂಬಾ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಹಣ್ಣಿನ ಮಾರುಕಟ್ಟೆ ಆವರಣದಲ್ಲಿ ನೀರು ಸಂಗ್ರಹವಾಗಿ ವ್ಯಾಪಾರಸ್ಥರಿಗೆ ತೊಂದರೆ ಉಂಟಾಯಿತು. ಅಲ್ಲದೇ ತಾಲೂಕಿನ ವಿವಿಧೆಡೆ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಮುಂಗಾರು ಹಂಗಾಮಿಗೆ ಹದಗೊಳಿಸಿದ್ದ ಕೃಷಿ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ವಡಗಾವಿ, ಹಳೆಬೆಳಗಾವಿ, ಹಲಗಾ, ಮಚ್ಛೆ, ಯಳ್ಳೂರ, ಬಸವನಕುಡಚಿ, ಕಡೋಲಿ, ಉಚಗಾಂವ ಮೊದಲಾದ ಕಡೆಗಳಲ್ಲಿ ರೈತರು ಬೆಳೆದಿದ್ದ ಮೆಣಸಿನಕಾಯಿ, ಟೊಮೊಟೊ, ಕೊತ್ತಂಬರಿ ಮೊದಲಾದ ತರಕಾರಿ ಬೆಳೆಗಳು ಜಲಾವೃತವಾಗಿ ಹಾನಿ ಸಂಭವಿಸಿದೆ.
ಅಧಿಕಾಗಳಿಗೆ ಸಚಿವರ ಸೂಚನೆ: 
ಮಳೆ ಮತ್ತು ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಚುರುಕಾಗಿ ಕಾರ್ಯತತ್ಪರರಾಗಬೇಕು. ಅವಶ್ಯ ಕ್ರಮಗಳನ್ನು ದೈನಿಂದಿನ ಆಧಾರದ ಮೇಲೆ ಕೈಗೊಂಡು ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 2-3 ದಿನಗಳಿಂದ ಸತತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮೇ 19ರಂದು ಜಿಲ್ಲೆಯಲ್ಲಿ ಸರಾಸರಿ 10 ಸೆಂ.ಮೀ. ಮಳೇಯಾಗಿದೆ. 3-4 ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಸನ್ನದ್ಧವಾಗಿರಬೇಕು. ದಿನದ 24 ಗಂಟೆಯೂ ಸ್ಪಂದಿಸಬೇಕು. ಪರಿಹಾರ ಕಾರ್ಯ ಅಗತ್ಯವಿದ್ದಲ್ಲಿ ತುರ್ತಾಗಿ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ./////