ಮದುವೆ ನಿರಾಕರಿಸಿದ ಯುವತಿ: ಅಪಹರಿಸಲು ಯತ್ನಿಸಿದ ಮಾವನ ಮಕ್ಕಳು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾವನ ಮಗಳು ಮದುವೆಯಾಗಲು ಒಪ್ಪಿಲ್ಲ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ.
ಕೊತ್ತನೂರು ನಗರದಲ್ಲಿರುವ ಯುವತಿಯ ನಿವಾಸಕ್ಕೆ ನುಗ್ಗಿದ ಸೋದರ ಮಾವನ ಮಕ್ಕಳು ಯುವತಿಯ ಬಳಿಕ ಮದುವೆಯಾಗಲೇಬೇಕು ಎಂದು ಪೀಡಿಸಿದ್ದಾರೆ. ಚಂದ್ರ ಶೇಖರ್, ಮಂಜುನಾಥ್ ಹಾಗೂ ಭೈರೇಂದ್ರ ಯುವತಿಯ ಮನೆಗೆ ನುಗ್ಗಿ ಆವಾಜ್ ಹಾಕಿದ ಮಾವನ ಮಕ್ಕಳಾಗಿದ್ದಾರೆ.
ಇದರಲ್ಲಿ ಚಂದ್ರಶೇಖರ್ ಎಂಬಾತ ಈ ಯುವತಿಯನ್ನು ಮದುವೆಯಾಗಲು ಬಯಸಿದ್ದ ಎನ್ನಲಾಗಿದೆ. ಆದರೆ ಯುವತಿಯು ಇನ್ನೂ ವಿದ್ಯಾಭ್ಯಾಸ ಮಾಡುತ್ತಿರೋದ್ರಿಂದ ನಾನು ಈಗಲೇ ಮದುವೆಯಾಗಲಾರೆ ಎಂದು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಳೆ.
ಏನಾದರೂ ಆಗಲಿ ನಾನು ಈಕೆಯನ್ನು ಎತ್ತಿಕೊಂಡು ಹೋಗಿಯಾದರೂ ಮದುವೆಯಾಗುತ್ತೇನೆ ಎಂದು ಯುವತಿಯ ತಂದೆಗೆ ಚಂದ್ರ ಶೇಖರ್ ಎಂಬಾತ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಬಳಿಕ ಮೂವರು ಸಹೋದರರು ಸೇರಿ ಯುವತಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದ ವೇಳೆಯಲ್ಲಿ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದಾರೆ.
ಜನರು ಸೇರಿದ ಬಳಿಕ ಬೆದರಿದ ಈ ಯುವಕರು ನಿನ್ನ ಮಗಳನ್ನು ಬಿಡುವ ಮಾತೇ ಇಲ್ಲ ಎಂದು ಮಾವನಿಗೆ ಆವಾಜ್ ಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯುವತಿ ಹಾಗೂ ಆಕೆಯ ತಂದೆ ಈ ಘಟನೆಯ ಬಳಿಕ ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿದ್ದು ಚಂದ್ರ ಶೇಖರ್, ಮಂಜುನಾಥ್ ಹಾಗೂ ಭೈರೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ .//////