Belagavi News In Kannada | News Belgaum

ಚಿಂದಿ ಸಂಗ್ರಹಿಸುವ ನೆಪದಲ್ಲಿ ಮನೆ ಕಳವು: ಆರೋಪಿ ಅರೆಸ್ಟ್.!

ಬೆಂಗಳೂರು:  ಚಿಂದಿ ಸಂಗ್ರಹಿಸುವ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಹೋಗಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ ಒಟ್ಟು 26.3 ಲಕ್ಷ ರೂ. ಮೌಲ್ಯದ 539 ಗ್ರಾಂ ಚಿನ್ನಾಭರಣ, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಸಿಡೆದಹಳ್ಳಿ, ಸಿದ್ದೇಶ್ವರ ಲೇಔಟ್, 2ನೆ ಮುಖ್ಯರಸ್ತೆ ನಿವಾಸಿ ಮೇ 3ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕೆಲಸದ ನಿಮಿತ್ತ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ದೆಹಲಿಗೆ ಹೋಗಿದ್ದರು. ಮೇ 9ರಂದು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ವಿಷಯ ತಿಳಿದು ಪಿರ್ಯಾದುದಾರರು ದೆಹಲಿಯಿಂದ ವಾಪಸ್ ಬಂದಿದ್ದಾರೆ.

ಕಳ್ಳರು ಮನೆಯ ಬಾಲ್ಕನಿಯ ಬಾಗಿಲಿಗೆ ಹಾಕಿದ್ದ ಗ್ರಿಲ್‍ಡೋರ್ ಒಡೆದು ಮನೆಯೊಳಗೆ ನುಗ್ಗಿ ಬೆಡ್‍ರೂಮ್‍ನ ವಾರ್ಡ್‍ರೂಬ್‍ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕಂಡುಬಂದಿದೆ. ಈ ಸಂಬಂಧ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಚಿಂದಿ ಸಂಗ್ರಹಿಸುವ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಹೋಗಿ ಕಳವು ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆಯ ಒಂದು ಕನ್ನಗಳವು ಹಾಗೂ ಆಟೋರಿಕ್ಷಾ ಕಳವು ಪ್ರಕರಣ ಪತ್ತೆಯಾಗಿವೆ.//////