ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಕಲ್ಲೆಸೆತ: ನಾಲ್ವರು ಆರೋಪಿಗಳು ಅಂದರ್

ಬೆಳಗಾವಿ: ಬೆಂಡಿಗೇರಿ ಗ್ರಾಮದಲ್ಲಿ ಮೇ 21ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯ ಕಟ್ಟಿಗೆ ಕಲ್ಲು ಎಸೆದ ಕಿಡಿಗೇಡಿತ್ತನ ತೊರಿದ ನಾಲ್ವರು ಆರೋಪಿಗಳನ್ನು ಹಿರೇಬಾಗೇವಾಡಿ ಪೊಲಿಸರು ಬಂಧಿಸಿದ್ದಾರೆ. ದೂರುದಾರನೇ ಪ್ರಕರಣದ ಪ್ರಮುಖ ಆರೋಪಿ ಎನ್ನುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಪಿರ್ಯಾದಿ ಚಂದ್ರಪ್ಪ ಕಣಬರಗಿ ಬೆಂಡಿಗೇರಿ ಇವರ ಹೇಳಿಕೆಯ ಆಧಾರದ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮರಾಠಾ ಸಮುಧಾಯದ ಜನರ ಮೇಲೆ ಪ್ರಕರಣ ದಾಖಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ತನಿಖೆ ಕೈಗೊಳ್ಳಲಾಗಿದೆ. ನಟ ದಿವಂಗತ ಪುನೀತ ರಾಜಕುಮಾರ ರವರ ಫೋಟೊದ ಕಂಬ ಮುರಿದ ಘಟನೆಯಲ್ಲಿ ಕಿಡಿಗೇಡಿಗಳ ಕೈವಾಡವಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಪಿರ್ಯಾದಿಯ ಸಹೋದರ ಸಂಬಂಧಿ ಮಗಳ ವಿವಾಹವು ಹೊನ್ನಿಹಾಳ ಗ್ರಾಮದ ಮಾರುತಿ ಎಂಬಾತನೊಂದಿಗೆ ನೆರವೇರುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಆಧರಿಸಿ ಯುವತಿ ಅಪ್ರಾಪ್ತ ವಯಸ್ಕಳಿದ್ದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮದುವೆಯನ್ನು ನಿಲ್ಲಿಸಿದ್ದರು. ಅದೇ ಕಾರಣಕ್ಕೆ ಸದರಿ ಪಿರ್ಯಾದಿ ಹಾಗೂ ಸಂಬಂಧಿಕರು ಮರಾಠಿ ಸಮುಧಾಯದವರು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಜರುಗಬೇಕಾದ ಕಲ್ಯಾಣ ಕಾರ್ಯಕ್ರಮಕ್ಕೆ ಅಡಚಣೆ ಮಾಡಿದ್ದಾರೆ ಎಂಬ ದ್ವೇಷಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣವನ್ನು ಪೊಲೀಸ್ ಇನ್ಸಪೆಕ್ಟರ್ ಹಿರೇಬಾಗೇವಾಡಿ ತನಿಖೆ ಕೈಗೊಂಡಿದ್ದು, ಪರಿಶೀಲಿಸಲಾಗಿ ಪಿರ್ಯಾದಿ ಹಾಗೂ ಅವರ ಸಂಬಂಧಿಕರು ಸಂಗೊಳ್ಳಿ ರಾಯಣ್ಣ ಮೂರ್ತಿಯ ಕಟ್ಟೆಗೆ ಕಲ್ಲು ಹಾಕಿ, ಕನ್ನಡ ನಟ ದಿವಂಗತ ಪುನಿತ ರಾಜಕುಮಾರ ರವರ ಫೋಟೊದ ಕಂಬ ಮುರಿದು ಮರಾಠಾ ಸಮಾಜದವರ ಮೇಲೆ ಹಾಕಿ ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ದೂರು ನೀಡಿದ್ದ ಚಂದ್ರಪ್ಪ ಲಕ್ಷ್ಮಣ ಕಣಬರಗಿ, ಮಹಾಂತೇಶ ಕರಿಗಾರ, ಬಸವರಾಜ ದೇಮಪ್ಪ ಹುಲಮನಿ ಹಾಗೂ ಅರ್ಜುನ ಬೋಜಪ್ಪ ಶಿನಾಯ್ಕರ ಅವರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.
ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕುರಿತು ಪೊಲೀಸ್ ಬಂದೋಬಸ್ತ ಮುಂದುವರೆಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ./////