Belagavi News In Kannada | News Belgaum

ರಾಜ್ಯಸಭಾ ಚುನಾವಣೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿಯಾದ ಜೆಡಿಎಸ್‌ ನಾಯಕರು

ಬೆಂಗಳೂರು: ರಾಜ್ಯಸಭಾ ಚುನಾವಣೆಯ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಎಲ್ಲಾ ಪಕ್ಷಗಳೂ ಸಹ ರಣತಂತ್ರ ಎಣೆಯುತ್ತಿವೆ. ಪಕ್ಷದ ಚೌಕಟ್ಟುಗಳನ್ನೂ ಮೀರಿ ವಿರೋಧ ಪಕ್ಷಗಳ ಕದ ತಟ್ಟುವುದು ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಜೆಡಿಎಸ್ ಮುಖಂಡರು ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಹಾಗೂ ಬಿಎಂ. ಫಾರೂಕ್, ಶಾಸಕರಾದ ರಾಜೇಂದ್ರ, ಶರಣಗೌಡ ಬಯ್ಯಾಪುರ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಆಗಿರುವ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುವಂತೆ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್ ಗೆಲುವು ನಿರಾಯಾಸವಾಗಿ ಆಗುತ್ತದೆ. ಆದರೆ, ನಾಲ್ಕನೇ ಅಭ್ಯರ್ಥಿಗಳಾಗಿ ಕಾಂಗ್ರೆಸ್‌ನಿಂದ ಮನ್ಸೂರ್ ಅಲಿ ಖಾನ್, ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಹಾಗೂ ಬಿಜೆಪಿಯಿಂದ ಲೆಹರ್ ಸಿಂಗ್ ಸಿರೋಯ ಕಣದಲ್ಲಿ ಇದ್ದಾರೆ. ಈ ಮೂವರ ಮಧ್ಯೆ ಈಗ ಪೈಪೋಟಿ ಏರ್ಪಟ್ಟಿದೆ. ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯುತ್ತದೆ.
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸದ್ಯ ವಿದೇಶ ಪ್ರವಾಸದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿಯೇ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ಗೆಲ್ಲಬೇಕಾದರೆ ಕಾಂಗ್ರೆಸ್ ಬೆಂಬಲ ಅನಿವಾರ್ಯವಾಗಿದೆ. ಕಾಂಗ್ರೆಸ್ ಒಬ್ಬ ಅಭ್ಯರ್ಥಿ ಗೆದ್ದ ನಂತರ 25 ಶಾಸಕರ ಮತಗಳು ಹೆಚ್ಚುವರಿ ಇರುತ್ತದೆ. ಜೆಡಿಎಸ್ ಶಾಸಕರ ಸಂಖ್ಯಾಬಲ 32 ಇದೆ. ಹೀಗಾಗಿ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಲಾಗಿದೆ.
ಸೌಹಾರ್ದ ಭೇಟಿ: ಸಭೆಯ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ. ಸರವಣ, “ಪಕ್ಷದ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇವೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ಸಹಕಾರ ನೀಡುವಂತೆ ಕೋರಿದ್ದೇವೆ. ಅದಕ್ಕೆ ಸ್ಪಂದಿಸಿರುವ ಸಿದ್ದರಾಮಯ್ಯ ಅವರೂ ನಾಮಪತ್ರ ಹಿಂತೆಗೆದುಕೊಳ್ಳಲು ಇನ್ನೂ ಎರಡು ದಿನ ಸಮಾಯವಕಾಶ ಇದೆ. ಈ ಬಗ್ಗೆ ನೋಡೋಣ ಎಂದು ಹೇಳಿದ್ದಾರೆ. ಇಂದಿನ ಭೇಟಿಯ ಬಗ್ಗೆ ಕುಮಾರಸ್ವಾಮಿ ಅವರಿಗೆ ವಿವರಿಸುತ್ತೇವೆ. ಹಿರಿಯ ನಾಯಕರು ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು./////