ಅಕ್ರಮವಾಗಿ 700 ಗ್ರಾಂ ಅಫೀಮ್ ಸಾಗಾಟ : ಅಂತರ ರಾಜ್ಯ ಆರೋಪಿಗಳ ಬಂಧನ

ಬೆಂಗಳೂರು: ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ ರಾಜ್ಯ ಆರೋಪಿಯೊಬ್ಬನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿ 700 ಗ್ರಾಂ ಅಫೀಮ್ ವಶಪಡಿಸಿಕೊಂಡಿದ್ದಾರೆ.
ಮೂಲತಃ ರಾಜಸ್ತಾನದ ಆರೋಪಿಯು ಐದು ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದು, ಎಲೆಕ್ಟ್ರಿಕಲ್ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದನು.
ನಂತರದ ದಿನಗಳಲ್ಲಿ ಮಾದಕವಸ್ತು ಮಾರಾಟದಲ್ಲಿ ತೊಡಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾ ಗಿದೆ. ಮೇ 29ರಂದು ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಇನ್ಸ್ಪೆಕ್ಟರ್ ಚಂದ್ರಶೇಖರ್ ಗಸ್ತಿನಲ್ಲಿದ್ದಾಗ ಮಲ್ಲೇಶ್ವರ 18ನೇ ಕ್ರಾಸ್ ಆಟದ ಮೈದಾನದ ಹತ್ತಿರ ಆರೋಪಿಯೊಬ್ಬ ಮಾದಕ ವಸ್ತು ಮಾರಾಟ ಮಾಡುತ್ತಿ ದ್ದಾನೆಂಬ ಮಾಹಿತಿ ಲಭಿಸಿದೆ.
ತಕ್ಷಣ ಸಬ್ಇನ್ಸ್ಪೆಕ್ಟರ್ ಕಾರ್ಯ ಪ್ರವೃತ್ತರಾಗಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಅಂತರರಾಜ್ಯ ಆರೋಪಿಯನ್ನು ಬಂಧಿಸಿ 200 ಗ್ರಾಂ ಅಫೀಮನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮನೆಯಲ್ಲಿ ಇನ್ನೂ ಹೆಚ್ಚಿನ ಮಾದಕ ವಸ್ತು ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಆರೋಪಿಯ ಮನೆ ಪರಿಶೀಲಿಸಿ 500 ಗ್ರಾಂ ಅಫೀಮನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ರಾಜಸ್ಥಾನಕ್ಕೆ ಹೋದಾಗ ರೈಲಿನ ಮೂಲಕ ಅಫೀಮು ಸಾಗಣೆ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದುದು ತಿಳಿದು ಬಂದಿರುತ್ತದೆ. ಮಲ್ಲೇಶ್ವರಂ ಉಪ ವಿಭಾಗದ ಡಿಸಿಪಿ ವೆಂಕಟೇಶ್ ನಾಯ್ಡು ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಚಂದ್ರಶೇಖರ್ ಅವರನ್ನೊಳಗೊಂಡ ತಂಡ ಈ ಕಾರ್ಯಚರಣೆ ಕೈಗೊಂಡು ಆರೊಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ./////