ಸಾಲ ತೀರಿಸಲು ಸರಗಳ್ಳತನಕ್ಕೆ ಯತ್ನಿಸಿದ್ದ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಮಾಡಿದ್ದ ಸಾಲವನ್ನು ಮರುಪಾವತಿಸಲು ಸರಗಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರತಿಷ್ಠಿತ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ನಗರದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳು ಲಾಭಾಂಶ ಗಳಿಸುವ ಆಯಪ್ವೊಂದರ ಜಾಹೀರಾತಿಗೆ ಮಾರು ಹೋಗಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಹಣಕ್ಕಾಗಿ ಆಯಪ್ ಮೂಲಕ ಲೋನ್ ಪಡೆದುಕೊಂಡಿದ್ದ ಇವರು ಸ್ನೇಹಿತರಿಂದಲೂ ಹಣ ಪಡೆದಿದ್ದರು. ನಂತರ ಲೋನ್ ಕಟ್ಟಲು ಸಾಧ್ಯವಾಗದಿದ್ದಾಗ ಕಳ್ಳತನಕ್ಕೆ ಇಳಿದಿದ್ದಾರೆ.
ಕಳೆದ 28ರಂದು ಬೆಳಗ್ಗೆ 10.15ರ ಸುಮಾರಿನಲ್ಲಿ ಈ ಇಬ್ಬರು ಡಿಯೋ ಬೈಕ್ನಲ್ಲಿ ನಂದಿನಿ ಲೇಔಟ್ನ ಬಿಎಚ್ಇಎಲ್ ಪಾರ್ಕ್ ಬಳಿ ಸರಗಳ್ಳತನಕ್ಕೆ ಹೋಗಿದ್ದಾರೆ. ಈ ಮಾರ್ಗದಲ್ಲಿ ಬರುತ್ತಿದ್ದ 65 ವರ್ಷದ ವೃದ್ಧೆಯ ಸರ ಎಗರಿಸಲು ಸಂಚು ರೂಪಿಸಿ ಅದರಂತೆ ವಿದ್ಯಾರ್ಥಿ ಚಾಲನೆಯಲ್ಲಿಯೇ ಬೈಕ್ ನಿಲ್ಲಿಸಿಕೊಂಡು ನಿಂತಿದ್ದನು.
ವಿದ್ಯಾರ್ಥಿನಿ ವೃದ್ಧೆ ಬಳಿ ಹೋಗಿ ಮುಖಕ್ಕೆ ಖಾರದ ಪುಡಿ ಎರಚಿ ಸರ ಎಗರಿಸಲು ಯತ್ನಿಸಿದಾಗ ವೃದ್ಧೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಗಾಬರಿಯಾದ ವಿದ್ಯಾರ್ಥಿ ತಕ್ಷಣ ಬೈಕ್ ಹತ್ತಿಕೊಂಡು ಇಬ್ಬರೂ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ವೃದ್ಧೆ ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.////