Belagavi News In Kannada | News Belgaum

ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಬೆಳಗಾವಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ, ಸಮೀಪದ ಹೊಸೂರು ಗ್ರಾಮದ ಯೋಧ ಪ್ರಕಾಶ‌ ಮಡಿವಾಳಪ್ಪ ಸಂಗೊಳ್ಳಿ (28) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.
ಶುಕ್ರವಾರ ನಸುಕಿನ ಹೊತ್ತಿಗೆ ಯೋಧನ ಪ್ರಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದಾಗ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಅಷ್ಟೊತ್ತಿಗೆ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತಲಿನ ಹಳ್ಳಿಗಳಿಗೂ ಹರಡಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಯೋಧನ ಸಾವಿಗೆ ಕಂಬನಿ ಮಿಡಿದರು.
ಪ್ರಕಾಶ ಅವರ ಅಭಿಮಾನಿಗಳು, ಸ್ನೇಹಿತರು, ಸಹಪಾಠಿಗಳು ಸೇರಿಕೊಂಡು ತೆರೆದ ವಾಹನದಲ್ಲಿ ಕಳೇಬರದ ಮೆರವಣಿಗೆ ಮಾಡಿದರು. ಪುಷ್ಪಾಲಂಕೃತ ವಾಹನವು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮನೆಗಳ ಮುಂದೆ ಬಂದಾಗ ಹಲವರು ವಾಹನ ಹತ್ತಿ ಯೋಧನ ಅಂತಿಮ ದರ್ಶನ ಪಡೆದರು. ದಾರಿಯುದ್ದಕ್ಕೂ ದೇಶಭಕ್ತಿ ಗೀತೆಗಳು ಮೊಳಗಿದವು. ಭಾರತ್‌ ಮಾತಾ ಕಿ ಜೈ, ಫೌಜಿ ಪ್ರಕಾಶ್‌ ಅಮರ್‌ ರಹೇ… ಎಂದು ಯುವಕರು ಘೋಷಣೆ ಹಾಕಿದರು. ಬೈಲಹೊಂಗಲ ಸಮೀಪದ ಹೊಸೂರು ಗ್ರಾಮದಲ್ಲಿ ಶುಕ್ರವಾರ ನಡೆದ ಯೋಧ ಪ್ರಕಾಶ ಸಂಗೊಳ್ಳಿ ಅವರ ಅಂತಿಮ ಯಾತ್ರೆಯಲ್ಲಿ ಅಪಾರ ಜನ ಪಾಲ್ಗೊಂಡರು.

ಸೇನಾ ನಿಯಮದಂತೆ ಅಂತ್ಯಕ್ರಿಯೆ: ಮರಾಠಾ ಲಘು ಪದಾತಿ ದಳದ ಸುಬೇದಾರ್‌ಗಳಾದ ಲಕ್ಷ್ಮಣ ಪೂಜಾರ, ಎಂ.ಎಸ್.ಕೆ. ಹುಬ್ಬಳ್ಳಿ, ದಯಾನಂದ ಭೂವಾ ಅವರ ನೇತೃತ್ವದಲ್ಲಿ, ಅಂತ್ಯಕ್ರಿಯೆ ವೇಳೆ ಸೇನಾ ನಿಯಮಗಳನ್ನು ಅನುಸರಿಸಲಾಯಿತು. ಯೋಧರ ತಂಡವು ಪ್ರಕಾಶ ಅವರ ದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜ ಹಾಗೂ ಅವರ ಸೇನಾ ಸಮವಸ್ತ್ರಗಳನ್ನು ತಾಯಿ ಕಸ್ತೂರೆವ್ವ ಹಾಗೂ ಪತ್ನಿ ಚನ್ನಮ್ಮ ಅವರ ಕೈಗೆ ಹಸ್ತಾಂತರಿಸಿದರು.‌
ಈ ವೇಳೆ ತಹಶೀಲ್ದಾರ್‌ ಪಾಟೀಲ, ಹೊಸೂರು ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು, ಅಧಿಕಾರಿಗಳು, ಎನ್‌ಸಿ‌ಸಿ ಕೆಡೆಟ್‌ಗಳು ಶಿಸ್ತಿನಿಂದ ಪಾಲ್ಗೊಂಡರು.
ಸೀಮಂತದ ಮನೆಯಲ್ಲಿ ಮಡುಗಟ್ಟಿದ ಶೋಕ: ಪ್ರಕಾಶ ಅವರ ಪತ್ನಿ ಚನ್ನಮ್ಮ ತುಂಬು ಗರ್ಭಿಣಿ. ಅವರ ಸೀಮಂತ ಕಾರ್ಯಕ್ರಮವನ್ನು ಸಂಭ್ರಮದಿಂದ ಮಾಡಲು ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು. ತಂದೆಯಾಗುವ ಉಲ್ಲಾಸದಲ್ಲಿದ್ದ ಯೋಧ, ಶವವಾಗಿದ್ದನ್ನು ಕಂಡು ಕುಟುಂಬ ದಿಗ್ಭ್ರಮೆಗೊಂಡಿದೆ. ಪತ್ನಿ, ತಾಯಿ ಹಾಗೂ ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದ ಹೆಣ್ಣುಮಕ್ಕಳು ಅವರನ್ನು ಸಂಬಾಳಿಸಲು ಪರದಾಡಬೇಕಾಯಿತು.////