Belagavi News In Kannada | News Belgaum

ದೇಸೂರಿನ ರಸಗೊಬ್ಬರ ಕಳವು ಪ್ರಕರಣ: ಐವರ ಖದೀಮರ ಬಂಧನ

ಬೆಳಗಾವಿ: ನಗರ ಹೊರ ವಲಯದ ದೇಸೂರ ರೈಲ್ವೆ ನಿಲ್ದಾಣದ ಗೂಡ್ಸ್‌ಶೆಡ್​ನ ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂ. ಮೌಲ್ಯದ ಡಿಎಪಿ ರಸಗೊಬ್ಬರ ಕಳ್ಳತನ ಮಾಡಿದ ಐವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಹಲಗಿಮರಡಿ ಗ್ರಾಮದ ನಾಗರಾಜ ಈರಣ್ಣಾ ಪಠಾತ (21), ಹೊಸ ವಂಟಮೂರಿ ಗ್ರಾಮದ ವಸೀಮ್ ಇಸ್ಮಾಯಿಲ್ ಮಕಾಂದರ (23), ಹುದಲಿ ಗ್ರಾಮದ ಗಜಬರಅಲಿ ಗೌಸಮುದ್ದಿನ ಜಿಡ್ಡಿಮನಿ(39), ಖಾನಾಪುರ ತಾಲೂಕಿನ ಪಂಡಿತ ಕಲ್ಲಪ್ಪಾ ಸನದಿ(37), ಮಂಜುನಾಥ ಸೋಮಪ್ಪ ಹಮ್ಮನ್ನವರ(30) ಬಂಧಿತ ಆರೋಪಿಗಳು.

ಮೇ 23ರಂದು ಗೋದಾಮಿನಲ್ಲಿ ಇಟ್ಟಿದ್ದ 900 ಆರ್‌ಸಿಎಪ್ ಕಂಪನಿಯ ಡಿಎಪಿ ರಸಗೊಬ್ಬರದ ಚೀಲಗಳು ಕಳ್ಳತನವಾಗಿತ್ತು. ಈ ಕುರಿತು ಗೋದಾಮಿನ ವ್ಯವಸ್ಥಾಪಕ ಶಿವಾಜಿ ಬಾಳಾರಾಮ ಆನಂದಾಚೆ ಎಂಬುವವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ 5 ಜನರನ್ನು ಬಂಧಿಸಿ 10 ಲಕ್ಷ ಮೌಲ್ಯದ ರಸಗೊಬ್ಬರದ 810 ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳತನ ಮಾಡಲು ಉಪಯೋಗಿಸಿದ ಎರಡು ಲಾರಿಯನ್ನೂ ಜಪ್ತಿ ಮಾಡಿದ್ದಾರೆ.//////