Belagavi News In Kannada | News Belgaum

ಆರ್ಥಿಕ ಸದೃಢತೆಯಿಂದ ಸ್ವಾವಲಂಬನೆ ದಾರಿ ಖಚಿತ: ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ

ಶ್ರೀ ಭೈರವನಾಥ ಸ್ವ-ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮ

ಬೆಳಗಾವಿ: ಮಹಿಳೆಯರು ಆರ್ಥಿಕ ಸದೃಢತೆ ಹೊಂದಿದರೆ ಸ್ವಾವಲಂಬನೆಗೆ ದಾರಿಯಾಗುತ್ತದೆ. ಅದಕ್ಕೆ ಮೂಲ ಮಾರ್ಗ ನಾನಾ ತರಬೇತಿಗಳನ್ನು ಪಡೆದು ಆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ ಕರೆ ನೀಡಿದರು.

ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭೈರವನಾಥ ಸ್ವ-ಸಹಾಯ ಸಂಘ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ, ಸಹಕಾರ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಔದ್ಯೋಗಿಕರಣ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಸ್ತುತ ಮಹಿಳೆಯರು ಮುಂದುವರೆದಿದ್ದು ಸಂತಸದ ವಿಚಾರ ಎಂದರು.

ಪ್ರಸ್ತುತ ಆರ್ಥಿಕ ಪ್ರಗತಿಯೂ ಮುಖ್ಯವಾಗಿದ್ದು, ಒಂದು ಕುಟುಂಬ ಪ್ರಗತಿ ಹೊಂದಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮಹಿಳೆಯರು ಹಣಕಾಸು ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸರ್ಕಾರಗಳು ಮಹಿಳೆಯರ ಆರ್ಥಿಕ ಪ್ರಗತಿಗೆ ಮತ್ತು ಶೈಕ್ಷ ಣಿಕ ಸ್ವಾವಲಂಬನೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಕಾರಣ ಮಹಿಳೆಯರು ಸಂಘಟಿತರಾಗಿ ಎಲ್ಲರಿಗೂ ಸರ್ಕಾರದ ಯೋಜನೆಗಳು ತಲುಪುವಂತಾಗಲು ಶ್ರಮಿಸಬೇಕೆಂದು ಕರೆ ನೀಡಿದರು.

ಸ್ವ-ಸಹಾಯ ಸಂಘಗಳಿಂದ ಸಾಕಷ್ಟು ಮಹಿಳೆಯರು ಎಲ್ಲಾ ದೃಷ್ಟಿಯಿಂದ ಪ್ರಗತಿ ಕಾಣುತ್ತಿದ್ದು, ಮಹಾನ್‌ ಸಾಧಕಿಯರಾದ ಸುಧಾ ಮೂರ್ತಿ ಅವರಂತ ಸರಳತೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ರೇಖಾ ಸುತಾರ, ಕಲ್ಪನಾ ಪವಾರ, ರೋಹಿನಿ ನಾಥಭುವ, ಸುಮಣ ಪಾಟೀಲ್, ಇಂದು ಪಾಟೀಲ್, ಲಿಲಾಬಾಯಿ ಪಿಂಗಟ, ಬಾಬು ದೊಡಮನಿ, ಮಲಗೌಡ ಪಾಟೀಲ್ ಮತ್ತು ಗ್ರಾಪಂ ಸದಸ್ಯರು ಸೇರಿದಂತೆ ಸಾರ್ವಜನಿಕರು ಇದ್ದರು.