ನಿಮ್ಮ ಜತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ

ಧಾರವಾಡ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಜೆಡಿಎಸ್ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಸಂಧಾನ ಮಾಡಿಕೊಳ್ಳುವಂತೆ ಹೆಚ್ಡಿಕೆ ಆಹ್ವಾನ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡುವುದೇ ಈಗ ಸಂಧಾನ. ಅವರು ನಮಗೆ ಮತ ಹಾಕಬೇಕು ಅದೇ ಸಂಧಾನ. ಈ ಹಿಂದೆ ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ, ಅವರು ಈಗ ಯಾಕೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ಗುರಿಯಾದ್ರೆ ಜೆಡಿಎಸ್ನವರು ನಮಗೆ ಬೆಂಬಲಕೊಡಲಿ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ, ಅವರ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದರು.
ನಮ್ಮ ಹೈಕಮಾಂಡ್ ಇರೋದು ದೆಹಲಿಯಲ್ಲಿ, ಅವರ ಹೈಕಮಾಂಡ್ ಇರೋದು ಪದ್ಮನಾಭನಗರದಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ, ಏನೇ ಆಗೋದಿದ್ರೂ ಮತದಾನದ ದಿನವೇ ತೀರ್ಮಾನ ಆಗುತ್ತದೆ ಎಂದರು./////