Belagavi News In Kannada | News Belgaum

ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ಕುಂದಾನಗರಿ ಜನರಿಗೆ ಆತಂಕ

ಬೆಳಗಾವಿ: ಕೋವಿಡ್ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವ ಬೆನ್ನಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ.

ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದು,  ಬೆಳಗಾವಿ ಜಿಲ್ಲಾಡಳಿತ  ಮಾತ್ರ  ಯಾವುದೇ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳದಿರುವದರಿಂದ ಕುಂದಾನಗರಿ ಜನರಿಗೆ ಆತಂಕ ಎದುರಾಗಿದೆ. ಬೆಳಗಾವಿ ಜಿಲ್ಲೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆಯ ಆತಂಕ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 2,701 ಕೋವಿಡ್ ಪ್ರಕರಣ ಪತ್ತೆಯಾಗಿದೆ.
ಮುಂಬೈ ಮಹಾನಗರವೊಂದರಲ್ಲೇ 1,765 ಪ್ರಕರಣಗಳು ಪತ್ತೆಯಾಗಿವೆ. ಮುಂಬೈನಲ್ಲೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ನಿಯಮ ಜಾರಿಯಾಗಿದೆ. ಈಗ ಮಹಾರಾಷ್ಟ್ರದಲ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ, ಬೆಳಗಾವಿ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದ ಪರಿಣಾಮ ಮಹಾರಾಷ್ಟ್ರ ರಾಜ್ಯದಿಂದ ಜನರು ಯಾವುದೇ ಅಂಜಿಕೆ ಇಲ್ಲದೇ  ರಾಜ್ಯಕ್ಕೆ ಬರುತ್ತಿದ್ದಾರೆ.  ಇದರಿಂದಾಗಿ ರಾಜ್ಯದಲ್ಲೂ ಕೊರೊನಾ ಆತಂಕ ಮನೆ ಮಾಡಿದ್ದು, ಬೆಳಗಾವಿ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಗಡಿಭಾಗದಲ್ಲಿ ಚೆಕ್ ಪೋಸ್ಟ್ ತೆರೆದು ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ./////