ರಾಜ್ಯದಲ್ಲಿ ಜೆಡಿಎಸ್ ನಂಬರ್ ಒನ್ ಸ್ಥಾನಕ್ಕೆ ಬರಲಿದೆ : ಸಿ.ಎಂ.ಇಬ್ರಾಹಿಂ ಭವಿಷ್ಯ

ಬೆಂಗಳೂರು: ಬೇಕಾದಷ್ಟು ಪಕ್ಷಾಂತರ ಪರ್ವಮಾಡಲಿ ರಾಜ್ಯದಲ್ಲಿ ನಮ್ಮ ಪಕ್ಷ ನಂಬರ್ ಒನ್ ಸ್ಥಾನಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ನಗರದ ಫ್ರೀಡಂಪಾರ್ಕ್ನಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಾಂತರಿ ಶಾಸಕರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಖರೀದಿಸಿವೆ ಎಂದು ಆರೋಪಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ 2ನೇ ಸ್ಥಾನ ಹಾಗೂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಲು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೌಂಡೇಷನ್ ಹಾಕಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ಹಾಕಿಸಿದ್ದು 2ನೇ ಪ್ರಾಶಸ್ತ್ಯದ ಮತವನ್ನು ಇವರಿಬ್ಬರು ಬಿಜೆಪಿಗೆ ಹಾಕಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ಮತ ಹಾಕಿಸಿದ ಆರೋಪದ ಮೇಲೆ ಇವರಿಬ್ಬರನ್ನು ವಜಾ ಮಾಡುವ ಧೈರ್ಯ ಕಾಂಗ್ರೆಸ್ ವರಿಷ್ಠರಿಗಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮನ್ಸೂರ್ ಖಾನ್ಗೆ ಜಟ್ಕಾ ಮಾಡಿ ಬಿಟ್ಟರು. ಹಲಾಲ್ ಮಾಡಿದ್ದರೂ ನಡೆಯುತ್ತಿತ್ತು. ನನಗೂ ಕಾಂಗ್ರೆಸ್ನವರು ಜಟ್ಕಾ ಮಾಡಲು ಹೊರಟಿದ್ದರು. ಆದರೆ ತಪ್ಪಿಸಿಕೊಂಡು ಎಚ್.ಡಿ.ಕುಮಾರಸ್ವಾಮಿ ಅವರ ಪಕ್ಕದಲ್ಲಿ ಕುಳಿತಿದ್ದೇನೆ ಎಂದು ಹೇಳಿದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ 12 ಶಾಸಕರನ್ನು ಮುಂಬೈಗೆ ಕಳುಹಿಸಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದವರು ಯಾರು? ಎಂದ ಅವರು, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರು ವಿಮಾನ ನಿಲ್ದಾಣಗಳಲ್ಲಿ ಡೀಲ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಕಚೇರಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ವಿಪ್ ಉಲ್ಲಂಘನೆ ಮಾಡಿ ಮತದಾನ ಮಾಡಿದ ಶಾಸಕರ ವಿರುದ್ಧ ಕಾನೂನು ಹೋರಾಟ ಮುಂದುವರೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದದಿಂದ ಪಕ್ಷದಲ್ಲಿ ಸ್ಥಾನಮಾನ ಪಡೆದು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ನಾಚಿಕೆಯಾಗುವುದಿಲ್ಲವೇ ಎಂದು ಶಾಸಕ ಶ್ರೀನಿವಾಸ್ ಅವರನ್ನುದ್ದೇಶಿಸಿ ಮಾತನಾಡಿದರು./