Belagavi News In Kannada | News Belgaum

ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ಎ.ಜಿ. ಕೊಡ್ಗಿ ನಿಧನ

ಮಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ, ರಾಜ್ಯ ಹಣಕಾಸು ಆಯೋಗದ ಮೂರನೇ ಅಧ್ಯಕ್ಷರಾಗಿದ್ದ ಎ.ಜಿ. ಕೊಡ್ಗಿ ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎ.ಜಿ. ಕೊಡ್ಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ಚಿಕಿತ್ಸೆಗೆ ಅಷ್ಟಾಗಿ ಸ್ಪಂದಿಸುತ್ತಿರಲಿಲ್ಲ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕರಾವಳಿ ಭೀಷ್ಮ ಎಂದೇ ಪ್ರಸಿದ್ಧರಾಗಿದ್ದ ಎ.ಜಿ. ಕೊಡ್ಗಿ ಕೆಲ ವರ್ಷಗಳಿಂದ ರಾಜಕಾರಣದಿಂದ ದೂರ ಸರಿದಿದ್ದರು. ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 1972-83ರವರೆಗೆ ಬೈಂದೂರು ಶಾಸಕರಾಗಿ, 1982-1990ರವರೆಗೆ ಕರ್ನಾಟಕ ಬ್ಯಾಂಕ್ ನಿರ್ದೇಶಕರಾಗಿ, 2006-08ರವರೆಗೆ ರಾಜ್ಯ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.//////