Belagavi News In Kannada | News Belgaum

ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕೆ ಏರ್ ಇಂಡಿಯಾಗೆ 10 ಲಕ್ಷ ದಂಡ

ನವದೆಹಲಿ: ಟಿಕೆಟ್ ಇದ್ದರೂ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಮತ್ತು ಅದಕ್ಕೆ ಪರಿಹಾರ ನೀಡದೇ ಇದ್ದುದಕ್ಕಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ 10 ಲಕ್ಷ ದಂಡ ವಿಧಿಸಿದೆ.
ಬೆಂಗಳೂರು, ಹೈದರಾಬಾದ್ ಹಾಗೂ ದೆಹಲಿಯಲ್ಲಿ ನಮ್ಮ ಕಣ್ಗಾವಲು ಘಟಕವು ಪರಿಶೀಲನೆ ನಡೆಸಿದಾಗ, ಏರ್ ಇಂಡಿಯಾ ಸಂಸ್ಥೆ ಮಾರ್ಗಸೂಚಿ (ಪ್ರಯಾಣಿಕರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ್ದು) ಉಲ್ಲಂಘಿಸಿರುವ ಕೆಲವು ನಿರ್ದಿಷ್ಟ ನಿದರ್ಶನಗಳು ಕಂಡುಬಂದಿವೆ. ಈ ಕುರಿತು ಶೋಕಾಸ್ ನೋಟಿಸ್ ನೀಡಲಾಗಿತ್ತು. ವಿಚಾರಣೆಯನ್ನೂ ನಡೆಸಲಾಗಿತ್ತು’ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿ ಏರ್‌ ಇಂಡಿಯಾವು ನೀತಿ ಹೊಂದಿಲ್ಲದಿರಬಹುದು. ಹೀಗಾಗಿ ಪರಿಹಾರ ನೀಡದೇ ಇದ್ದಿರಬಹುದು. ಆದರೆ ಇದು ಗಂಭೀರ ಮತ್ತು ಸ್ವೀಕಾರಾರ್ಹವಲ್ಲದ ಪ್ರಕರಣ. ನಿರ್ದಿಷ್ಟ ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೋರಲಾಗಿದೆ. ಏರ್ ಇಂಡಿಯಾ ನೀಡಿರುವ ವಿವರಣೆಯನ್ನು ಪರಿಶೀಲಿಸಿ 10 ಲಕ್ಷ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಮುಂದಿನ ಕ್ರಮ ಕೈಗೊಳ್ಳುವುದಕ್ಕೂ ಮೊದಲೇ ಪ್ರಯಾಣಿಕರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿ ನೀತಿ ರೂಪಿಸುವಂತೆಯೂ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಡಿಜಿಸಿಎ ಹೇಳಿದೆ.//////