Belagavi News In Kannada | News Belgaum

ಕುವೆಂಪುಗೆ ಅಪಮಾನ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆಗೆ ವಿವಿಧ ಸಂಘಟನೆಗಳ ಸಜ್ಜು

ಬೆಂಗಳೂರು: ದೋಷಪೂರಿತ ಪರಿಷ್ಕೃತ ಪಠ್ಯ-ಪುಸ್ತಕಗಳನ್ನು ವಾಪಸ್ಸು ಪಡೆದು, ಹಳೆಯ ಪಠ್ಯಗಳನ್ನು ಮಕ್ಕಳಿಗೆ ಒದಗಿಸಬೇಕು ಹಾಗೂ ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅಪಮಾನ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ನಾಳೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ.

ನಗರದ ಕೇಂದ್ರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಪ್ರತಿಭಟನೆ ನಡೆಸಲಿದೆ. ನಾಳೆ ಬೆಳಗ್ಗೆ10 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಯಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರು, ಹೋರಾಟಗಾರರು, ಮಠಾೀಶರು, ಸಂಶೋಧಕರು, ಕಾರ್ಮಿಕರು, ವಿದ್ಯಾರ್ಥಿಗಳು, ವಿಜ್ಞಾನಿಗಳು, ಬೋಧಕರು, ವಿವಿಧ ಸಂಘಟನೆಗಳು, ಶಿಕ್ಷಣ ತಜ್ಞರು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವ ಸಾಧ್ಯತೆಗಳಿವೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ಒಕ್ಕಲಿಗರ ಸಂಘವು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮುದಾಯಕ್ಕೆ ಕರೆ ನೀಡಿದೆ.

ಪ್ರತಿಭಟನೆಯು ಪಕ್ಷಾತೀತ, ಜ್ಯಾತ್ಯತೀತ, ಧರ್ಮಾತೀತವಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಪಠ್ಯಪರಿಷ್ಕರಣೆಯಲ್ಲಿ ಆಗಿರುವ ಲೋಪವನ್ನು ಖಂಡಿಸಲಿದ್ದಾರೆ ಎಂದು ಸಮಿತಿ ಹೇಳಿದೆ. ಕುವೆಂಪುರಾದಿಯಾಗಿ ಬುದ್ದ, ಮಹಾವೀರ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಸಾವಿತ್ರಿ ಫುಲೆ, ಪೆರಿಯಾರ್ ರಾಮಸ್ವಾಮಿ, ನಾರಾಯಣಗುರು, ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಮಹನೀಯರಿಗೆ ಅಪಮಾನವಾಗಿದೆ ಎಂದು ಸಮಿತಿ ಆರೋಪಿಸಿದೆ./////