Belagavi News In Kannada | News Belgaum

ಅಗ್ನಿಪಥ ವಿರುದ್ಧದ ಹೋರಾಟಕ್ಕೆ ಒಂದು ಬಲಿ

ಹೈದಾರಾಬಾದ್:  ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್‌ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೆಲಂಗಾಣಕ್ಕೂ ಹಬ್ಬಿದ್ದು, ಈ ಪ್ರತಿಭಟನಾ ಕಿಚ್ಚಿಗೆ ಸಿಕಂದರಾಬಾದ್‌ ರೈಲ್ವೇ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಹೈದರಾಬಾದ್‌ ನಗರ ಈಗ ಹೊತ್ತಿಉರಿಯುತ್ತಿದ್ದು, ಅಗ್ನಿಪಥ್‌ ಯೋಜನೆ ವಿರೋಧಿಸಿ ಪ್ರತಿಭಟನಾಕಾರರು ಉಗ್ರ ಸ್ವರೂಪ ತಾಳಿದ್ದಾರೆ. ಪ್ರತಿಭಟನಕಾರರನ್ನು ನಿಗ್ರಹಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಪ್ರತಿಭಟನಾನಿರತ ವ್ಯಕ್ತಿ ಮೃತನಾಗಿದ್ದು, ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅಗ್ನಿಪಥ್ ಖಂಡಿಸಿ ಪ್ರತಿಭಟನೆ, ಹಿಂಸಾಚಾರ: 34 ರೈಲುಗಳ ಸಂಚಾರ ರದ್ದು ಅಗ್ನಿಪಥ್‌ ಯೋಜನೆ ರದ್ದುಗೊಳಿಸುವಂತೆ ಸಿಕಂದರಾಬಾದ್‌ನಲ್ಲಿ ಯುವಕರ ಪ್ರತಿಭಟನೆ ಹೆಚ್ಚಾಗಿದ್ದು, ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒರ್ವ ವ್ಯಕ್ತಿ ಮೃತನಾಗಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಮೃತನಾದ ವ್ಯಕ್ಯಿಯನ್ನು ನಿರ್ಮಲ್‌ನ ನಿವಾಸಿ ದಾಮೋದರ್‌ ಕುರಶಿಯಾ ಎನ್ನಲಾಗಿದೆ. ಇವರು ಸೇನಾ ನೇಮಕಾತಿ ಮಂಡಳಿಗೆ ತೆರಳಿ ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಪ್ರತಿಭಟನೆಯ ಭಾಗವಾಗಿ ಬಂದಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಿಕಂದರಬಾದ್‌ ರೈಲು ನಿಲ್ದಾಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಕಾರರ ನಿಗ್ರಹಕ್ಕಾಗಿ ಪೊಲೀಸರು ಲಾಠಿ ಚಾರ್ಚ್‌ ನಡೆಸಿದರು. ಆದರೆ ಅವರು ಕದಲಲಿಲ್ಲ ಹಾಗಾಗಿ ಗುಂಡು ಹಾರಿಸಲಾಯಿತು. ಈ ವೇಳೆ ಹಲವಾರು ಯುವಕರು ಗಾಯಗೊಂಡರು. ಪ್ರತಿಭಟನಾಕಾರರು ಅಗ್ನಿಪಥ್‌ ಯೋಜನೆ ರದ್ದುಗೊಳಿಸಿ ಹಳೆಯ ಪದ್ಧತಿಯಂತೆ ಸೇನಾ ನೇಮಕಾತಿ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸಿಕಂದರಾಬಾದ್‌ನಲ್ಲಿ ಉಂಟಾದ ಗಲಭೆ ಹಾಗೂ ಸಾವಿನಿಂದಾಗಿ ತೆಲಂಗಾಣ ರಾಜ್ಯದ ಇತರ ವಿಭಾಗೀಯ ರೈಲು ನಿಲ್ದಾಣಗಳಲ್ಲೂ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ. ನಾಂಪಲ್ಲಿ ವಾರಂಗಲ್‌, ಮಹಬೂಬಾಬಾದ್‌, ಕಾಜಿಪೇಟ್‌, ಜನಗಾಮಾ, ಡೋರ್ನಾಕಲ್‌, ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.//////