Belagavi News In Kannada | News Belgaum

ಸೋನಿಯಾ-ರಾಹುಲ್‌ಗೆ ಸಮನ್ಸ್‌; ಬೆಳಗಾವಿಯಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಯಾದ ಇಡಿಯನ್ನು ದುರ್ಬಳಕೆ ಮಾಡಿಕೊಂಡು ಕೃತಕವಾಗಿ ಸೃಷ್ಟಿಸಿದ ಕೇಸ್‌ ನಲ್ಲಿ ತನಿಖೆ ಕೈಗೆತ್ತಿಕೊಂಡು ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಭೂತಪೂರ್ವ ಅಧ್ಯಕ್ಷ  ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ ವಿನಾಕಾರಣ ಕಿರುಕುಳ ನೀಡುತ್ತಿರುವ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವ ಆರ್.‌ ಬಿ. ತಿಮ್ಮಾಪುರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಹಾಗೂ ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೆಳಗಾವಿ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮಾನ್ಯ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಕೋಮುವಾದ ಮತ್ತು ರಾಷ್ಟ್ರ ನಾಯಕರನ್ನು ತೇಜೋವದೆ ಮಾಡುವುದು ಜಾಸ್ತಿಯಾಗಿದ್ದು, ಕಾರಣ ಪ್ರಧಾನಿ ಮೋದಿ ಅವರು ಎಚ್ಚರ ವಹಿಸಬೇಕು. ಇಲ್ಲದಿದ್ದರೆ ದೇಶ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಕಾರ್ಯಕರ್ತರು ಭ್ರಷ್ಟ ಬಿಜೆಪಿ ಸರ್ಕಾರ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಅಧ್ಯಕ್ಷ ರಾಜು ಸೇಠ್‌, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಕಾಂಗ್ರೆಸ್‌ ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ಮಲಗೌಡ ಪಾಟೀಲ್‌, ಶೋಯಬ್‌ ಅಪ್ತಾರ್‌, ಇರ್ಫಾನ್‌ ಅಪ್ತಾರ್‌, ಮನಸೂರ್‌ ಸೈಯದ್‌, ಕಾರ್ತಿಕ ಪಾಟೀಲ್‌, ಸಿದ್ದಿಕ ಅಂಕಲಗಿ, ಬಸವರಾಜ ಶಿಗ್ಗಾವಿ, ರಾಜಾಸಲಿ ಮೋಕಾಶಿ, ಆಯಿಶಾ ಸನದಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಪಕ್ಷದ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಸರ್ವ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು./////