Belagavi News In Kannada | News Belgaum

ರಾಜ್ಯದಲ್ಲಿ AAP ಗೆ ಒಂದು ಅವಕಾಶ ಕೊಡಿ: ಭಾಸ್ಕರ ರಾವ್

ಬೆಳಗಾವಿ; ಕರ್ನಾಟಕದಲ್ಲಿ ಜೆಸಿಬಿ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದರೂ ನಿರೀಕ್ಷೆಯಂತೆ ಕೆಲಸ ಮಾಡಲು ವಿಫಲರಾಗಿದ್ದಾರೆ ಎಂದು ಆಮ್ ಆದ್ಮಿ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಹೇಳಿದರು.

ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಮೇಲೆ ಜನರು ವಿಶ್ವಾಸ ಇಟ್ಟು ಅಧಿಕಾರ ನೀಡಿದರೂ ಸಮರ್ಪಕವಾಗಿ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಸಾಕಷ್ಟು ನಾಯಕರು ಭ್ರಷ್ಟಾಚಾರದಲ್ಲಿ ತೋಡಗಿದ್ದಾರೆ. ಪಂಜಾಬ್ ನಲ್ಲಿ ಒಬ್ಬ ಸಚಿವ 1 % ಭ್ರಷ್ಟಾಚಾರ ಮಾಡಿದ್ದಾರೆ ಎಂದು ತಿಳಿದ ತಕ್ಷಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ದೇಶಕ್ಕೆ ಮಾದರಿಯಾಗಿದೆ ಆಮ್ ಆದ್ಮಿ ಪಕ್ಷ ಎಂದರು.

ರಾಜ್ಯದಲ್ಲಿ ದೀನ ದಲಿತರ, ಮಹಿಳೆ, ಯುವಕರ, ವೃದ್ಧರನ್ನು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜದವರನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಮುಕ್ತವಾಗಿ ಅವಕಾಶ ಕಲ್ಪಿಸುತ್ತದೆ. ಆಮ್ ಆದ್ಮಿಯಲ್ಲಿ ವೇದಿಕೆ ಸಿದ್ದವಾಗಿದೆ. ಎಲ್ಲ ಸಮುದಾಯದವರು ಆಪ್ ಸೇರ್ಪಡೆಗೊಂಡು ಪಕ್ಷ ಬಲ ಪಡಿಸಬೇಕೆಂದು ವಿನಂತಿಸಿಕೊಂಡರು.

ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಯುವಕರು ಉದ್ಯೋಗ ಕಳೆದುಕೊಂಡು ನಿರುದ್ಯೋಗ ಸಮಸ್ಯೆ ಉದ್ಬವವಾಗಿದೆ. ಅಲ್ಲದೆ, ಕೇಂದ್ರ ಸರಕಾರ‌ ರೈತ ವಿರೋಧಿ ಕೃಷಿ ‌ಮಸೂದೆ ಕಾಯ್ದೆಯನ್ನು ತಂದು ಹಿಂಪಡೆದರೂ ರಾಜ್ಯ ಸರಕಾರ ಮಾತ್ರ ಹಿಂಪಡೆಯಲಿಲ್ಲ. ಈ ಕುರಿತು ಯಾರೊಬ್ಬರು ಪ್ರಕಟಣೆ ಹೊರಡಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಾರಂಭವಾದರೆ ಮೂರು ಪಕ್ಷದವರು ಸೇರಿಕೊಂಡು ನಡೆಸುತ್ತಾರೆ. ಮಣ್ಣಿನ ಮಕ್ಕಳು ಎಂದು ಹೇಳುವ ಜೆಡಿಎಸ್ ಕೃಷಿ ಮಸೂದೆ ಹಿಂಪಡೆಯಲು ಹೋರಾಟ ನಡೆಸಲಿಲ್ಲ ಎಂದ ಅವರು, ಆಮ್ ಆದ್ಮಿಯಲ್ಲಿ ಯಾರೊಬ್ಬರದ್ದು ಸಕ್ಕರೆ ಕಾರ್ಖಾನೆಯಿಲ್ಲ. ನ್ಯಾಯಕ್ಕಾಗಿ ಹೋರಾಟ ನಡೆಸುವುದೆ ಒಂದೇ ಎಂದರು.

ಇತ್ತೀಚೆಗೆ ವಾಯವ್ಯ ಶಿಕ್ಷಕ ಮತಕ್ಷೇತ್ರದಲ್ಲಿ ಹಣದ ಹೊಳೆಯನ್ನು ಹರಿಸಿ ಗೆಲವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಅಮಲಿನಲ್ಲಿ ಪೊಲೀಸ್ ಅಧಿಕಾರಿಗೆ ಹಲ್ಲು‌ ಮುರಿಯುತ್ತೇನೆ ಎಂದಿರುವುದು ಸರಿಯಲ್ಲ. ಇದು ಖಂಡನೀಯ ಎಂದರು.

ಪರಿಸರ, ನೀರು, ಕೆರೆ ಅಭಿವೃದ್ಧಿ ಬಗ್ಗೆ ಯಾವ ಪಕ್ಷಗಳು ಮಾತನಾಡುತ್ತಿಲ್ಲ. ಜನರ ಜೀವನದ ಸಲುವಾಗಿ ಯಾವ ಪಕ್ಷವು ಮಾತನಾಡುತ್ತಿಲ್ಲ. ಒಂದು ಬಾರಿ ಆಮ್ ಆದ್ಮಿಗೆ ಅಧಿಕಾರ ಕೊಡಿ ಜನರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದರು.

ಆಮ್ ಆದ್ಮಿ ಪಕ್ಷ ಕರ್ನಾಟಕದ ರಾಜನೀತಿಯಲ್ಲಿ ಹಲವು ವರ್ಷಗಳಿಂದ ಇದೆ. ಬೆಳಗಾವಿ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಪ್ರವಾಸ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಹಣಬಲ ತೊಳ್ಬಲ ಇರುವ ವ್ಯಕ್ತಿಗಳಿಗೆ ಮಣೆ ಹಾಕುತ್ತಿದ್ದಾರೆ. ಕೆಲ ಪ್ರಾಮಾಣಿಕ ನಾಯಕರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುವುದಾದರೆ ಸ್ವಾಗತಿಸಲಾಗುವುದು ಎಂದು ಪ್ರತಿಕ್ರಯಿಸಿದರು.

ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ ಯೋಜನೆಯ ಬಗ್ಗೆ ಅವೈಜ್ಞಾನಿಕವಾಗಿದೆ ಎಂದು ತಿರಸ್ಕರಿಸುವುದು ಬೇಡಾ. ಯುವಕರಿಗೆ ಅನಕೂಲವಾಗುವುದಾದರೆ ಒಪ್ಪಿಕೊಳ್ಳುವುದು ಸೂಕ್ತ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಆಮ್ ಆದ್ಮಿ ಮುಖಂಡರಾದ ರಾಜಕುಮಾರ ಟೋಪಣ್ಣವರ, ಆನಂದ ಹಂಪಣ್ಣವರ, ವಿಜಯ ಶಾಸ್ತ್ರೀಮಠ, ಬಸನಗೌಡ ಚಿಕ್ಕನಗೌಡರ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.//////