ಕಾಲಿನಲ್ಲೇ ಪಿಯು ಪರೀಕ್ಷೆ ಬರೆದು ಸಾಧನೆ ಮಾಡಿದ ವಿಕಲಚೇತನ

ಮಂಗಳೂರು: ವಿಕಲಚೇತನೊಬ್ಬ ತನ್ನಕಾಲಿನಲ್ಲಿ ಪಿಯುಸಿ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೌದು.. ಬಂಟ್ವಾಳದ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ವಾಣಿಜ್ಯ ವಿಭಾಗದಲ್ಲಿ 524 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ 424 ಅಂಕ ಗಳಿಸಿದ್ದರು. ಅಂದು ಊರಜನರು ಮತ್ತು ಜನಪ್ರತಿನಿಧಿಗಳು ತೋರಿದ ಪ್ರೀತಿಗೆ ಮನಸೋತಿದ್ದ ಅವರಿಗೆ ಜೀವನ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಮತ್ತಷ್ಟು ಹುಮ್ಮಸ್ಸು ಬಂದಿತ್ತು. ಅದಕ್ಕೆ ಬೆಂಬಲವಾಗಿ ನಿಂತದ್ದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ. ಉಚಿತ ಶಿಕ್ಷಣ ಯೋಜನೆಯಲ್ಲಿ ಪುಸ್ತಕ, ಕಲಿಕಾ ಸಾಮಗ್ರಿ ಮತ್ತು ಸಮವಸ್ತ್ರ ಒದಗಿಸಿದ ಸಂಸ್ಥೆಗೆ ಕೌಶಿಕ್ ಗೌರವ ತಂದುಕೊಟ್ಟಿದ್ದಾರೆ.
ಜನಿಸುವಾಗಲೇ ಕೌಶಿಕ್ಗೆ ಕೈಗಳು ಇರಲಿಲ್ಲ. ಬಲಭಾಗದಲ್ಲಿ ಹೆಗಲಿನಿಂದ ಈಚೆ ಕೈಯ ಲಕ್ಷಣವೇ ಇಲ್ಲ, ಎಡಭಾಗದಲ್ಲಿ ಮೊಣಕೈ ವರೆಗೆ ಕೈಯನ್ನು ಹೋಲುವ ರೀತಿಯ ಮಾಂಸ ಜೋತಾಡುತ್ತಿದೆ. ಬೀಡಿ ಕಾರ್ಮಿಕೆ, ಅಮ್ಮ ಜಲಜಾಕ್ಷಿ ಕಾಲುಬೆರಗಳುಗಳ ನಡುವೆ ಬಳಪದ ಕಡ್ಡಿ ಸಿಕ್ಕಿಸಿ ಅಕ್ಷರ ಬರೆಯಲು ಕಲಿಸಿದ್ದರು. ಅದೇ ಅವರ ಮೊದಲ ಪಾಠವಾಗಿತ್ತು. ಬಂಟ್ವಾಳದ ಎಸ್ವಿಎಸ್ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಓದಿದ್ದರು.
ಕೌಶಿಕ್ ತಂದೆ ರಾಜೇಶ್ ಬಡಗಿ ಕೆಲಸ ಮಾಡುತ್ತಿದ್ದರು. ಕೌಶಿಕ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಅವರು ಅನಾರೋಗ್ಯದಿಂದ ತೀರಿಕೊಂಡಿದ್ದರು. ತಂದೆಗೆ ನನ್ನ ಮೇಲೆ ತುಂಬ ಪ್ರೀತಿ ಇತ್ತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾಗ ಸಂಭ್ರಮಿಸಿದ್ದರು. ಆದರೆ ಇಂದು ಕೌಶಿಕ್ ತನ್ನಕಾಲಿನಲ್ಲಿ ಪಿಯುಸಿ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿ ತನ್ನ ತಂದೆ ಕನಸು ನನಸು ಮಾಡಿದ್ದಾರೆ./////