ಪ್ರಧಾನಿ ಮೋದಿಗೆ ಯತ್ನಾಳ್ ಕೇಳಿರುವ ಪ್ರಶ್ನೆ ಸ್ವಾಗತಾರ್ಹ ಎಂದ ಎಚ್. ದುಗ್ಗಪ್ಪ

ದಾವಣಗೆರೆ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಯಡಿಯೂರಪ್ಪ ಅವರ ಮಕ್ಕಳ ಮನೆಗಳ ಮೇಲೆ ದಾಳಿ ನಡೆಸಲಿ ಯಾರ ಮನೆಯಲ್ಲಿ ಹೆಚ್ಚು ಹಣವಿದೆಯೋ ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಮೋದಿಗೆ ಹಾಕಿರುವ ಸವಾಲು ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ಎಚ್. ದುಗ್ಗಪ್ಪ ಹೇಳಿದರು.
‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ಸಂಸ್ಥೆಯಲ್ಲಿ ಹತ್ತಾರು ಸಾವಿರ ಜನರು ಕೆಲಸ ಮಾಡುತ್ತಿದ್ದರು. ಅಂತಹ ಸಂಸ್ಥೆ ಮುಚ್ಚಿಹೋಗುವ ಸನ್ನಿವೇಶದಲ್ಲಿ ಸೋನಿಯಾ ಗಾಂಧಿಯವರು ಸಂಸ್ಥೆಯ ಸಹಾಯಕ್ಕೆ ನಿಂತು ₹ 400 ಕೋಟಿ ಸಾಲ ಕೊಡಿಸಿದ್ದು ತಪ್ಪಾ? ಮುಚ್ಚಿ ಹೋಗುತ್ತಿದ್ದ ಪ್ರೆಸ್ ಮೇಲೆ ಯಾಕೆ ಇ.ಡಿ. ದಾಳಿ ಮಾಡಿಸುತ್ತೀರಿ? ಈ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನೇಕೆ ಜೈಲಿಗೆ ಹಾಕುತ್ತೀರಿ ಎಂದು ಬಸನಗೌಡ ಪಾಟೀಲ್ ಪ್ರಶ್ನಿಸಿರುವುದು ಸರಿಯಾಗಿದೆ ಎಂದು ತಿಳಿಸಿದರು.
‘ಒಂದು ಪ್ರೆಸ್ ಸಂಸ್ಥೆಗೆ ಸಹಾಯ ಮಾಡಿದ್ದು ತಪ್ಪೆನ್ನುವುದಾದರೆ ಪ್ರಧಾನಿ ಅವರು ದೊಡ್ಡ ದೊಡ್ಡ ಕಾರ್ಖಾನೆಗಳಿಗೆ, ಶುಗರ್ ಫ್ಯಾಕ್ಟರಿಗಳಿಗೆ, ಅನಿಲ್ ಅಂಬಾನಿ, ಆದಾನಿ ಅಂತಹವರಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಕೊಡುತ್ತಾರೆ. ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು’ ಎಂದು ಅವರು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಅವರು ಕೊರೊನಾದಿಂದ ಆಸ್ಪತ್ರೆ ಸೇರಿದ್ದರೂ ಬಿಡದೆ, ಇ.ಡಿ. ನೆಪದಲ್ಲಿ ಪೊಲೀಸರನ್ನು ಬಿಟ್ಟು ತನಿಖೆ ಮಾಡಿಸಲಾಗಿದೆ. ಕಾಂಗ್ರೆಸ್ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರಪರಾಧಿಗಳೆಂದು ಎಲ್ಲರಿಗೂ ಗೊತ್ತಿದೆ ಎಂಬುದು ಬಸನಗೌಡ ಪಾಟೀಲರ ಪ್ರಶ್ನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿಕೆ ನೀಡಿದ್ದಾರೆ.///////