Belagavi News In Kannada | News Belgaum

ಬಸ್ ಏಜೆಂಟ್ ನ ಬರ್ಬರ ಕೊಲೆ

ದಾವಣಗೆರೆ: ಖಾಸಗಿ ಬಸ್ ಏಜೆಂಟ್  ಓರ್ವನನ್ನು ಕೀಡಿಗೇಡಿಗಳು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ  ಘಟನೆ ಚನ್ನಗಿರಿ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.  ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಹತ್ಯೆಗೀಡಾದ ಏಜೆಂಟ್ ಎಂದು ಗುರುತಿಸಲಾಗಿದೆ. ನಲ್ಲೂರಿನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಸಲೀಂ ಎಂಬಾತ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಆರೋಪಿ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾ‌ನೆ.

ಚನ್ನಗಿರಿ ಪಟ್ಟಣದ ತರಳಬಾಳು ವೃತ್ತದಲ್ಲಿ ಘಟನೆ ನಡೆದಿದೆ. ಎಂದಿನಂತೆ ನಲ್ಲೂರಿನಿಂದ ಚನ್ನಗಿರಿಗೆ ಜಾಕೀರ್ ಬಂದಿದ್ದಾನೆ. ಜಾಕೀರ್ ಆಗಮಿಸುತ್ತಿದ್ದಂತೆ ಬೈಕ್ ನಲ್ಲಿ ಬಂದ ಸಲೀಂ ಏಕಾಏಕಿಯಾಗಿ ಜಾಕೀರ್ ಗೆ ಚಾಕುವಿನಿಂದ ಚುಚ್ಚಿದ್ದಾನೆ. ರಕ್ತಸಿಕ್ತವಾಗಿ ಬಿದ್ದ ಬಳಿಕವೂ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.

ಪ್ರಾಥಮಿಕ ಮಾಹಿತಿ ಪ್ರಕಾರ ಅನೈತಿಕ ಸಂಬಂಧ ಅಥವಾ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ‌. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.//////